ಸಾಮಾಜಿಕ ಬಹಿಷ್ಕಾರ ತಡೆಗಟ್ಟದಿದ್ದರೆ ಹೋರಾಟ

Published on
ಚಾಮರಾಜನಗರ: ಜಿಲ್ಲೆಯಲ್ಲಿ ಜೀವಂತವಾಗಿರುವ ಅನಿಷ್ಠ ಪದ್ಧತಿ ಸಾಮಾಜಿಕ ಬಹಿಷ್ಕಾರವನ್ನು ತಡೆಗಟ್ಟದಿದ್ದರೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹೋರಾಟ ರೂಪಿಸುವುದಾಗಿ ಪ್ರಜಾ ಪರಿವರ್ತನೆ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ಮುತಪ್ಪ ಎಚ್ಚರಿಸಿದರು.
ದೇಶದಲ್ಲಿ ನಿಷೇಧಿಸಿರುವ ಬಹಿಷ್ಕಾರ ಜಿಲ್ಲೆಯಲ್ಲಿ ಜೀವಂತವಾಗಿದ್ದು, ಚಾಮರಾಜನಗರ ತಾಲೂಕಿನ ಲಿಂಗರಾಜಪುರದಲ್ಲಿ ಗೋವಿಂದಶೆಟ್ಟಿ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದು, ಕಳೆದ ವರ್ಷದಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಈ ಸಂಬಂಧವಾಗಿ ಪೊಲೀಸ್ ಠಾಣೆ, ಜಿಲ್ಲಾಧಿಕಾರಿಗಳು,  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆದರೆ ಕ್ರಮಕೈಗೊಂಡಿಲ್ಲವೆಂದು ಆರೋಪಿಸಿದರು.
ಗೋವಿಂದಶೆಟ್ಟಿ ಮಾತನಾಡಿ, ನನ್ನ ಮನೆ ಒತ್ತುವರಿಯಾಗಿದೆ ಎಂದು ಸಮುದಾಯದ ಯಜಮಾನರು ನನಗೆ ನನ್ನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸಮುದಾಯದ ಹಿರಿಯ ಮುಖಂಡರು ಮನೆಯ ಒತ್ತುವರಿ ಗ್ರಾಮದ ವಿಷಯಕ್ಕೆ ಸಂಬಂಧಿಸಿದಂತೆ 2023 ಜೂ. 3 ರಂದು 5 ಸಾವಿರ ದಂಡ ಪಡೆದಿರುತ್ತಾರೆ. ಇದಲ್ಲದೆ 16 ಹಳ್ಳಿಯ ಕಟ್ಟೆಗಡಿ ಯಜಮಾನರನ್ನು ಕರೆಸಿ ಪಂಚಾಯಿತಿ ಮಾಡಿಸಿ 50 ಸಾವಿರ ರೂ. ದಂಡ ವಿಧಿಸಿದರು. ನನ್ನ ಮನೆ ಖಾತೆ, ಇ-ಸ್ವತ್ತು ಸರಿಯಾಗಿದೆ ನಾನು ಯಾವುದೇ ಜಾಗವನ್ನು ಒತ್ತುವರಿ ಮಾಡಿಲ್ಲ. ನಾನು 50 ಸಾವಿರ ದಂಡವನ್ನು ಕೊಡಲ್ಲ ಎಂದು ಹೇಳಿದಾಗ ಲಿಂಗರಾಜಪುರ ಪುರ ಗ್ರಾಮಸ್ಥರು, 16 ಹಳ್ಳಿ ಕಟ್ಟೆಗಡಿಯವರು ಬಹಿಷ್ಕಾರ ಹಾಕಿ ಯಾವುದೇ ಸಭೆ, ಸಮಾರಂಭಕ್ಕೂ ಕರೆಯಲ್ಲ ದೇವಸ್ಥಾನದಲ್ಲಿ ಪೂಜೆ ತೆಗೆದುಕೊಳ್ಳುತ್ತಿಲ್ಲ. ಸಂಘಕ್ಕೂ ಸೇರಿಸುತ್ತಿಲ್ಲ. ಸಾಲವನ್ನು ಕೊಡಿಸುತ್ತಿಲ್ಲ. ಅಲ್ಲದೆ ಜಮೀನಿಗೆ ನೀರು ಬಿಡುತ್ತಿಲ್ಲ ಜಮೀನಿಗೆ ನೀರು ಬಿಡುವವರಿಂದಲ್ಲೂ ಮಾತನಾಡಿಸಿದ್ದೀರಿ ಎಂದು ಅವರಿಗೆ 1 ಸಾವಿರ ರೂ. ದಂಡ ಹಾಕಿದ್ದಾರೆ. ನನಗೂ, ನನ್ನ ಕುಟುಂಬಕ್ಕೂ ತುಂಬಾ ತೊಂದರೆ ಕೊಡುತ್ತಿದ್ದಾರೆ. ಗ್ರಾಮದಲ್ಲಿ ನೆಮ್ಮದಿಯಿಂದ ಬದಕಲು ಬಿಡುತ್ತಿಲ್ಲ. ತುಂಬ ನೊಂದಿದ್ದೇವೆ. ನನಗೆ, ನನ್ನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ತೋಡಿಕೊಂಡರು.
ಪ್ರಜಾ ಪರಿವರ್ತನೆ ವೇದಿಕೆ ಜಿಲ್ಲಾಧ್ಯಕ್ಷ ಸಿದ್ದರಾಜು ಮಾತನಾಡಿ, ನಾನು ಕೂಡ ಮೂಲತ: ಲಿಂಗರಾಜಪುರ ಗ್ರಾಮದವನಾಗಿದ್ದು, ಕೊಡಗಿನ ಸುಂಟಿಕೊಪ್ಪನಲ್ಲಿ ವಾಸ ಮಾಡುತ್ತಿದ್ದೇನೆ. ನನ್ನ ಮಗಳು ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಗ್ರಾಮದವರು ನನ್ನನ್ನು ಪಂಚಾಯಿತಿಗೆ ಸೇರಿಸಿ 5 ಸಾವಿರ ‌ರೂ. ದಂಡ ಹಾಗೂ 16 ಹಳ್ಳಿ ಕಟ್ಟೆಗಡಿ ಸೇರಿಸಿ 60 ಸಾವಿರ‌ ರೂ. ದಂಡ ಪಡೆದಿರುತ್ತಾರೆ. ಒಂದು ವೇಳೆ ಮಗಳೊಂದಿಗೆ ಯಾವುದೇ ರೀತಿ ಸಂಪರ್ಕ ಇರಿಸಿಕೊಂಡರೆ 1.20 ಲಕ್ಷ ರೂ. ದಂಡ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ. ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡುತಿ ದ್ದೇನೆ ನ್ಯಾಯ ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪ್ರಜಾ ಪರಿವರ್ತನ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜು, ರಮೇಶ್, ಲಕ್ಷ್ಮೀ, ರಾಜಮ್ಮ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net