

ಚಿತ್ರದುರ್ಗ: ಸಾಮಾಜಿಕ ಜಾಗ್ರತೆ, ಬದ್ಧತೆ ಬರಹಗಾರನಿಗೆ ಇರಬೇಕೆಂದು ಕವಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ನಗರದ ರಶ್ಮಿ ಪ್ರಕಾಶನದಿಂದ ಭಾನುವಾರ ಏರ್ಪಡಿಸಿದ್ದ, ಪ್ರೊ.ಎಚ್.ಲಿಂಗಪ್ಪ ಅವರ ಬದುಕು-ಬರಹದ ಮನಸ್ವಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಬರಹಗಾರ ಜಾಗೃತಿಯಿಂದ ಜೀವನ ವಿಧಾನ, ಸಾಧನೆಗಳನ್ನು ರೂಢಿಸಿಕೊಳ್ಳಬೇಕು. ಇದಕ್ಕೆ ಕರ್ತವ್ಯ ಪ್ರಜ್ಞೆ ಮುಖ್ಯವಾಗುತ್ತದೆ ಎಂದರು.
ಲಿಂಗಪ್ಪ ಅವರು ಇಳಿ ವಯಸ್ಸಿನಲ್ಲೂ ಕೃತಿಗಳ ರಚನೆಯಲ್ಲಿ ತೊಡಗಿರುವುದು ದೊಡ್ಡ ಸಾಧನೆ. ದಮನಿತರ ಪರ ಸದಾ ಚಿಂತನೆಗಳು ಅವರ ಬರಹದಲ್ಲಿವೆ. ಲಿಂಗಪ್ಪ ಸಾಮಾಜಿಕ ಬದ್ಧತೆ ಬರವಣಿಗೆ ಜತೆಗೆ ಹೋರಾಟಗಾರರಾಗಿರುವುದು ವಿಶೇಷ ಎಂದು ಹೇಳಿದರು.
ಕೃತಿ ಬಿಡುಗಡೆ ಮಾಡಿದ ಜಾನಪದ ವಿದ್ವಾಂಸ ಡಾ.ಪಿ.ಬಿ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಸಾಹಿತ್ಯಕ್ಕೆ ಸಾಂಸ್ಕೃತಿಕ ಬಡತನವಿದೆ. ಕಥೆ, ಕಾದಂಬರಿ ಬರೆಯುವವರಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಗ್ರಂಥದ ಮೂಲಕ ಅಭಿನಂದಿಸುವುದು ಸಂಪ್ರದಾಯ. ಲಿಂಗಪ್ಪ 40ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಮನಸ್ವಿ ಎಂದರೆ ಮುಕ್ತ. ಇದೊಂದು ಅನುಭವ ಕೊಡುವ ಕೃತಿ ಎಂದರು.
ಬಂಡಾಯ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ಸೃಜನಶೀಲ ಮಾರ್ಗದರ್ಶಿ, ಅಭಿವ್ಯಕ್ತಿ ಬರವಣಿಗೆ ಸಮಾಜಕ್ಕೆ ಮುಖ್ಯ. ಬರಹಗಾರನ ಬದುಕು ಅಂತಃಸತ್ವದಿಂದ ಕೂಡಿದಾಗ ಮಾತ್ರ ಅನನ್ಯ, ಆಧರಣೀಯ, ಅನುಕರಣೀಯವಾಗಿರುತ್ತದೆ. ಸಮಾಜ ಸುಧಾರಣೆ ಉನ್ನತೀಕರಣಗೊಳಿಸಲು ಅಭಿನಂದನಾ ಗ್ರಂಥ ನೆರವಾಗಲಿದೆ ಎಂದು ತಿಳಿಸಿದರು.
ಲೇಖಕನ ಬದುಕು-ಬರಹ ಸಮನ್ವಯ ಅನುಸಂಧಾನವಾಗಬೇಕು. ಕೃತಿ ತರುವುದರ ಜತೆ ಲೇಖಕನಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಲಿಂಗಪ್ಪ ಅವರ ಬರಹ ಕಲಾತ್ಮಕ, ಸುಂದರ ಸ್ಫೂರ್ತಿದಾಯಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿ, ಲಿಂಗಪ್ಪ ಅವರ ಬದುಕು-ಬರಹದಲ್ಲಿ ಸಾಮಾಜಿಕ ಕಾಳಜಿ ಕಾಣಬಹುದು. ಬುದ್ಧ, ಬಸವ, ಅಂಬೇಡ್ಕರ್ ಅವರಲ್ಲಿದ್ದ ತಾಯಿತನವನ್ನು ಅಧ್ಯಯನ ಮಾಡಿ ಲೇಖಕರು ಪುಸ್ತಕ ಹೊರ ತಂದಿದ್ದಾರೆ. ಸಮಾನತೆ ತತ್ವ ಕೃತಿಯಲ್ಲಿದೆ ಎಂದು ತಿಳಿಸಿದರು.
ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯ ಡಾ.ಜೆ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಸಮಾನತೆ, ಮೌಲ್ಯ, ತಳಸಮುದಾಯದ ಗಟ್ಟಿತನ, ವಚನ ಸಾಹಿತ್ಯದ ಕುರಿತು ಬರೆಯಲು, ಮಾತನಾಡಲು ಎಲ್ಲರಿಗೂ ಹಕ್ಕಿದೆ ಎಂದರು.
ಬರವಣಿಗೆಗೆ ನಿರ್ಬಂಧವಿಲ್ಲ. ಬರೆಯಲು ಬಯಲಿದೆ. ಆದರೆ, ಬರೆಯುವ ತಾಕತ್ತಿರಬೇಕು. ಬದುಕು-ಬರಹಕ್ಕೆ ನಂಟಿದೆ. ಮನುಷ್ಯ-ಮನುಷ್ಯರ ನಡುವೆ ಉತ್ತಮ ಬಾಂಧವ್ಯ ವೃದ್ಧಿ ಪ್ರಸ್ತುತ ಸಮಾಜಕ್ಕೆ ಮುಖ್ಯವಾಗಿದೆ ಎಂದು ತಿಳಿಸಿದರು.
ಲಿಂಗಪ್ಪ ಮಾತನಾಡಿ ಬುದ್ಧ, ಬಸವ ಪ್ರಜ್ಞೆ, ಅಂಬೇಡ್ಕರ್ ಮಾರ್ಗದಲ್ಲಿ ನಂಬಿಕೆ ಇಟ್ಟುಕೊಂಡು ಕೃತಿಗಳನ್ನು ರಚಿಸಿದ್ದೇನೆ ಎಂದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಯಶೋದಾ ಬಿ.ರಾಜಶೇಖರಪ್ಪ, ಟಿ.ವಿ.ಸುರೇಶ್‌ಗುಪ್ತ, ಕೃಷ್ಣಮೂರ್ತಿ, ಜಿ.ಎಸ್.ಉಜ್ಜಿನಪ್ಪ, ದೊಡ್ಡಮಲ್ಲಯ್ಯ, ಬಿ.ಪಿ.ತಿಪ್ಪೇಸ್ವಾಮಿ, ಮುದ್ದುರಂಗಪ್ಪ, ಸಂಜೀವಕುಮಾರ್ ಪೋತೆ, ಲಕ್ಷ್ಮೀಕಾಂತ್ ಮತ್ತಿತರರು ಇದ್ದರು.