

ಕೋಲಾರ : ಉಳುವವನಿಗೆ ಭೂಮಿ ಒದಗಿಸುವ ಮೂಲಕ ಸಾಮಾಜಿಕ ಬದಲಾವಣೆ ತಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅನೇಕ ಕಾರ್ಯಕ್ರಮ ರೂಪಿಸಿ ಬಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದವರು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಿಗಮ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ ೧೦೮ನೇ ಜನ್ಮದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಬಗರಹುಕುಂ ಸಾಗುವಳಿ ಪದ್ಧತಿ ಜಾರಿಗೆ ತಂದಿದ್ದು ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಣಯವಾಗಿದೆ. ಇದರಿಂದ ದೀನ ದಲಿತರು, ಬಡವರು ಮತ್ತು ಸಣ್ಣ ರೈತರಿಗೆ ಜಮೀನು ಹೊಂದಲು ಅನುಕೂಲವಾಗಿದೆ ಎಂದು ಹೇಳಿದರು.
ಅರಸು ಅವರು ಬಡವರ ಪರವಾಗಿದ್ದರು. ಕಡುಬಡತನದಲ್ಲಿರುವವರನ್ನು ಮುಖ್ಯವಾಹಿನಿಗೆ ತಂದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸದೃಢಗೊಳಿಸುವ ಹಂಬಲ ಅವರಲ್ಲಿತ್ತು. ಹಿಂದುಳಿದ, ದಲಿತರ, ಬಡವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದ ಅರಸು ಜನರ ಮನಸ್ಸಿನಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿದ್ದಾರೆ. ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಮಾಡಿ ತೋರಿಸಿದ ಮೌನಕ್ರಾಂತಿಯ ಹರಿಕಾರ ಅವರಾಗಿದ್ದಾರೆ ಎಂದು ಹೇಳಿದರು. ಸಮಾರಂಭದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿನಿಲಯಗಳಲ್ಲಿದ್ದುಕೊಂಡು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ದೇವರಾಜ ಅರಸು ನಾಟಕ ಪ್ರದರ್ಶಿಸಿದರು.
ಸಂಸದ ಎಸ್.ಮುನಿಸ್ವಾಮಿ, ಶಾಸಕ ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಪಂ ಸಿಇಒ ಪದ್ಮಾಬಸಂತಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೋನಿಯಾ ವರ್ಣಿಕರ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೆರಿ ಬಳಿಯಿಂದ ದೇವರಾಜ ಅರಸು ಭಾವಚಿತ್ರವನ್ನೊಳಗೊಂಡ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ದೇವರಾಜ ಅರಸು ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿನಿಯರು ಕಳಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಬಂದಿದ್ದು ವಿಶೇಷವಾಗಿತ್ತು. ಡೊಳ್ಳು, ತಮಟೆವಾದನ ಸೆರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಕೆಲವು ವಿದ್ಯಾರ್ಥಿನಿಯರು ಡೊಳ್ಳು ಶಬ್ಧಕ್ಕೆ ನೃತ್ಯ ಪ್ರದರ್ಶಿಸಿದರು. ಮೆರವಣಿಗೆಗೆ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಜಿಪಂ ಸಿಇಒ ಪದ್ಮಾಬಸಂತಪ್ಪ ಮತ್ತಿತರರು ಚಾಲನೆ ನೀಡಿದರು. ಬಳಿಕ ಮೆರವಣಿಗೆ ಟಿ.ಚನ್ನಯ್ಯ ರಂಗಮಂದಿರ ತನಕ ಸಾಗಿ ಬಂದಿತು.