ಸಾಮಾಜಿಕ ಪಿಡುಗಿಗೆ ಸರಳ ವಿವಾಹ ಪರಿಹಾರ

KDR marrie
ಅಜ್ಜಂಪುರದಲ್ಲಿ ನಡೆದ ಪವನ್-ಶಶಿಕಲಾ ಅವರ ಮಂತ್ರ ಮಾಂಗಲ್ಯ ಮದುವೆಯಲ್ಲಿ ದಂಪತಿಗೆ ವಿವಾಹ ಸಂಹಿತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಬೋಧಿಸಿದರು. ಎಚ್.ಸಿ.ಲೋಕೇಶ್, ಚಂದ್ರಪ್ಪ, ರವಿ ದಳವಾಯಿ ಇತರರಿದ್ದರು.
Published on

ಕಡೂರು: ಸಮಾಜವನ್ನು ಬೆಂಬಿಡದೆ ಕಾಡುತ್ತಿರುವ ಹೆಣ್ಣುಭ್ರೂಣ ಹತ್ಯೆ, ರೈತರ ಆತ್ಮಹತ್ಯೆ, ವರದಕ್ಷಿಣೆ, ಗೃಹ ಹಿಂಸೆ ಇತರ ಸಾಮಾಜಿಕ ಸಮಸ್ಯೆಗಳಿಗೆ ಕುವೆಂಪು ಪ್ರಣೀತ ಮಂತ್ರ ಮಾಂಗಲ್ಯದಂಥ ಸರಳ ವಿವಾಹಗಳು ಪರಿಹಾರವಾಗಬಲ್ಲವು ಎಂದು ಪ್ರಾಧ್ಯಾಪಕ ಡಾ. ಎನ್.ಎಲ್.ಆನಂದ್ ತಿಳಿಸಿದರು.

ಅಜ್ಜಂಪುರದಲ್ಲಿ ಪವನ್ ಮತ್ತು ಶಶಿಕಲಾ ಅವರ ಮಂತ್ರಮಾಂಗಲ್ಯ ವಿವಾಹದಲ್ಲಿ ಮಾತನಾಡಿ, ಪ್ರಪಂಚದಲ್ಲೇ ಅತಿ ಹೆಚ್ಚು ಮದುವೆಗಳು ನಡೆಯುವ ದೇಶಗಳ ಸಾಲಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇವುಗಳಿಂದ ಪ್ರತಿ ವರ್ಷ ಸುಮಾರು 10.7 ಲಕ್ಷ ಕೋಟಿ ರೂ. ವ್ಯವಹಾರ ನಡೆಯುತ್ತದೆ. ಅಧ್ಯಯನಗಳು ಕಂಡುಕೊಂಡಂತೆ ದೇಶದಲ್ಲಿ ಕುಟುಂಬವೊಂದು ಶಿಕ್ಷಣಕ್ಕಾಗಿ ಖರ್ಚು ಮಾಡುವ ಎರಡು ಪಟ್ಟು ಹಣವನ್ನು ಮದುವೆಗಳಿಗಾಗಿ ಖರ್ಚು ಮಾಡುತ್ತದೆ. ಈ ಮೂಲಕ ಕುಟುಂಬಗಳು ಸಾಲಗಾರರಾಗಿ, ಬಡತನದಲ್ಲೇ ಬೇಯುವಂತಾಗಿವೆ. ಇದಕ್ಕೆ ಪರಿಹಾರವಾಗಿ ಕುವೆಂಪು ಅವರ ಮಂತ್ರ ಮಾಂಗಲ್ಯ ಜನರನ್ನು ಮೌಢ್ಯಗಳಿಂದ, ಆಡಂಬರ ವೆಚ್ಚಗಳಿಂದ ರಕ್ಷಿಸಿ, ಸಮಾಜದಲ್ಲಿ ಸಮತೆ-ಮಮತೆ ನಿರ್ಮಿಸುತ್ತದೆ ಎಂದರು.

ದಂಪತಿಗಳಿಗೆ ವಿವಾಹ ಸಂಹಿತೆ ಬೋಧಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ತೀರ ಖಾಸಗಿ ಕಾರ್ಯಕ್ರಮಗಳಾಗಬೇಕಿರುವ ಮದುವೆಗಳು ಸ್ವಪ್ರತಿಷ್ಠೆಯ, ತೋರಿಕೆಯ, ಅಹಂಗಳನ್ನು ತೃಪ್ತಿಪಡಿಸುವ ವೇದಿಕೆಗಳಾಗಿ ಮಾರ್ಪಟ್ಟಿರುವುದು ದುರಂತ. ಹಿಂದಿನ ಸಂಭ್ರಮ ಕಾಣದೆ ಕೇವಲ ಆಡಂಬರದಲ್ಲೇ ಅದರ ಅರ್ಥ ಕಳೆದುಹೋಗುತ್ತಿದೆ. ಯುವಕರು ಮದುವೆಯ ನಿಜವಾದ ಉದ್ದೇಶ ಅರಿತು ಸರಳ ವಿವಾಹ ಮೂಲಕ ದುಂದುವೆಚ್ಚ, ಕಂದಾಚಾರಗಳಿಗೆ ಕಡಿವಾಣಹಾಕಿ ಸಮಾಜಕ್ಕೆ ಮಾದರಿ ಆಗಬೇಕಿದೆ ಎಂದು ತಿಳಿಸಿದರು.

ಹಿರಿಯ ಉಪನೋಂದಣಾಧಿಕಾರಿ ಹಿರೇಗರ್ಜೆ ಲೋಕೇಶ್ ಮಾತನಾಡಿ, ಮದುವೆಗಳು ಇತ್ತೀಚೆಗೆ ಆಡಂಬರ, ಪತಿಷ್ಠೆಗಳಾಗುತ್ತಿವೆ. ಪೈಪೋಟಿಗೆ ಬಿದ್ದವರಂತೆ ಸಾಲ ಮಾಡಿ ಮದುವೆ ಮಾಡುತ್ತಿದ್ದಾರೆ. ಇದನ್ನು ಮನಗಂಡ ಕುವೆಂಪು ಅಂದೇ ಮಂತ್ರ ಮಾಗಲ್ಯ ಜಾರಿಗೆ ತಂದರು. ಅದರಂತೆ ಹಲವರಿಗೆ ಮದುವೆ ಮಾಡಿಸಿ ಆದರ್ಶ ಪುರುಷರಾದರು. ಪಾಲಕರು ಮಕ್ಕಳನ್ನು ಸರಳವಾಗಿ ಮದುವೆ ಮಾಡಿಸಿದರೆ ಎಲ್ಲ ಸಮಸ್ಯೆಗಳೂ ಪರಿಹಾರ ಆಗುತ್ತವೆ ಎಂದರು.

ತರೀಕೆರೆ ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ರಂಗ ಸಂಘಟಕ ಎ.ಸಿ.ಚಂದ್ರಪ್ಪ, ಶಿಕ್ಷಕ ನಾಗರಾಜು, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net