

ಕೂಡ್ಲಿಗಿ: ರಾಜ್ಯದಲ್ಲಿ ಭೂ ಒಡೆತನ ಹಾಗೂ ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆ ತಂದುಕೊಟ್ಟ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಉಳುವವನೆ ಭೂಮಿಯ ಒಡೆಯ ಕಾಯ್ದೆ ರಾಜ್ಯದ ಹಲವು ಜನರಿಗೆ ಭೂಒಡೆತನದ ಹಕ್ಕು ನೀಡಿತು ಎಂದರು.
ನಿರುದ್ಯೋಗಿಗಳಿಗೆ ಸಹಾಯಧನದಂತಹ ಕಾರ್ಯಕ್ರಮಗಳನ್ನು ರೂಪಿಸಿ ಸಾವಿರಾರು ಯುವಜನರಿಗೆ ನೆರವಾದರು. ಜೀತ ಪದ್ಧತಿ, ಮಲಹೊರುವ ಪದ್ಧತಿ ನಿರ್ಮೂಲನೆ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು. ಸಮಾಜಮುಖಿ ಕಾರ್ಯಗಳತ್ತ ಅವರ ಮನಸು ಸದಾ ತುಡಿಯುತ್ತಿತ್ತು ಎಂದು ಹೇಳಿದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಏಳಿಗೆಗೆ ಅರಸು ಸಾಕಷ್ಟು ಶ್ರಮಿಸಿದ್ದರು. ಅರಸು ರೂಪಿಸಿದ ಮಾರ್ಗದಲ್ಲಿಯೇ ರಾಜ್ಯ ಸರ್ಕಾರ ಸಾಗುತ್ತಿದೆ. ಅಭಿವೃದ್ಧಿ ನಿಗಮದ ಮೂಲಕ ಅಶಕ್ತರಿಗೆ ಸಾಲ ಸೌಲಭ್ಯ, ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಶಿಕ್ಷಣಕ್ಕೆ ಆದ್ಯತೆ ನೀಡಲು ರಾಜ್ಯದಲ್ಲಿ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ದೇವರಾಜ ಅರಸು ಕುರಿತು ಸಿಂಧನೂರಿನ ಬಸವತತ್ವ ಚಿಂತಕ ಗೋವಿಂದರಾಜ ಬಾರಿಕೇರ್ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.
ಮಾಜಿ ಸೈನಿಕ ಕಾಟೇರ ರಮೇಶ್, ಸಿಡಿಪಿಒ ಮಾಲುಂಬಿ, ಕಾಡುಗೊಲ್ಲ ಸಮಾಜದ ತಾಲೂಕು ಅಧ್ಯಕ್ಷ ದೊಡ್ಡಪ್ಪ, ಡಿ.ಬಿ.ಚಿತ್ತಪ್ಪ, ಜಿ.ಪಿ.ಗುರುಲಿಂಗಪ್ಪ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಕೆ.ಜಿ.ಆಂಜನೇಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶೇಕ್ ಮಹಮದ್ ಜಿಲಾನ್, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಶ್ಯಾಮಪ್ಪ, ವಿಸ್ತರಣಾಧಿಕಾರಿ ಅಹಮ್ಮದ್ ಸಾಹೇಬ್, ಸಿರಬಿ ಅಂಜಿನಪ್ಪ, ಎಫ್.ಎಂ.ಕೊರಚರ್ ಇದ್ದರು.