

ತುಮಕೂರು: 2005ರಲ್ಲಿ ತುಮಕೂರಿನಲ್ಲಿ ಅಹಿಂದ ಸಮಾವೇಶ ಆಯೋಜಿಸುವ ಮೂಲಕ ರಾಜಕೀಯವಾಗಿ ಪುಟಿದೆದ್ದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ತುಮಕೂರಿನಲ್ಲಿ ಕುರುಬ ಜಾಗೃತಿ ಸಮಾವೇಶವನ್ನು ಭರ್ಜರಿಯಾಗಿ ನಡೆಸುವ ಮೂಲಕ ವಿರೋಧಿಗಳಿಗೆ ಸಂದೇಶ ರವಾನಿಸಿದರು.
ನಗರದ ಕಾಳಿದಾಸ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶ ಭರ್ಜರಿ ಯಶಸ್ಸು ಕಂಡಿದ್ದು ಕುಲಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಅಧಿಕಾರಕ್ಕಾಗಿ ಸಾಮಾಜಿಕ ನ್ಯಾಯದ ಬಗ್ಗೆ ರಾಜೀ ಇಲ್ಲ ಎಂದರು.
2005ರಲ್ಲಿ ಅಹಿಂದ ಸಮಾವೇಶ ತುಮಕೂರಿನಲ್ಲಿಯೇ ಮಾಡಿದ್ದೆವು, ಈಗ ಬಹುದಿನದ ನಂತರ ಕುರುಬರ ಸಮಾವೇಶ ನಡೆಯುತ್ತಿದೆ, ಒಂದು ಜಾತಿಯ ಸಮಾವೇಶ ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ ಹಿಂದಿನಿಂದಲೂ ಇದೆ, ಸಾವಿರಾರು ಜಾತಿಗಳಿವೆ, ಬೇರೆ ಜಾತಿಗಳಲ್ಲಿರುವ ಬಡವರು ಅವಕಾಶದಿಂದ ವಂಚಿತರಾಗಿದ್ದಾರೆ. ದೇಶದ ಸಂಪತ್ತು ಹಾಗೂ ಅಧಿಕಾರ ಎಲ್ಲ ಜಾತಿಯ ಬಡವರಿಗೆ ಹಂಚಿಕೆಯಾಗಬೇಕು, ಕುರುಬರೂ ರಾಜಕೀಯವಾಗಿ ಜಾಗೃತರಾಗುವ ಅಗತ್ಯವಿದೆ ಎಂದರು.
ಅಂಬೇಡ್ಕರ್ ಅವರು ಹೇಳಿದಂತೆ ಅಧಿಕಾರ ಬಲಾಢ್ಯರ ಕೈಯಲ್ಲಿರಬಾರದು, ಅವಕಾಶದಿಂದ ವಂಚಿತರಾದ ಜನರಿಗೆ ನ್ಯಾಯ ಸಿಗುವುದಿಲ್ಲ ಹಾಗಾಗಿ, ಎಲ್ಲಾ ಶೋಷಿತ ವರ್ಗದ ಜನರು ಆರ್ಥಿಕವಾಗಿ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಬೇಕಿದೆ ಎಂದರು.
ಕುರುಬರಿಗೆ ಸಿದ್ದರಾಮಯ್ಯ ಏನೂ ಮಾಡಿಲ್ವಾ?: ಸಿದ್ದರಾಮಯ್ಯ ಕುರುಬರಿಗೆ ಏನು ಮಾಡಿದ್ದಾರೆ ಎಂದು ನನ್ನ ರಾಜಕೀಯ ವಿರೋಧಿಗಳು ಪದೇಪದೆ ಕೇಳುತ್ತಾರೆ, ಬರೀ ಕುರುಬರಲ್ಲ, ಸಮಾಜದ ಎಲ್ಲ ಶೋಷಿತರಿಗೆ ನ್ಯಾಯ ಕೊಡಬೇಕಾದ್ದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಗುಡುಗಿದರು.
ಸಾಮಾಜಿಕ ನ್ಯಾಯದ ಬಗ್ಗೆ ರಾಜೀ ಇಲ್ಲ. ಅಧಿಕಾರ ಇರಲಿ, ಇಲ್ಲದಿರಲಿ. ಅಧಿಕಾರಕ್ಕಾಗಿ ರಾಜಕೀಯ ಪಕ್ಷದ ಬಾಲ ಹಿಡಿದು ನಾನು ಹೋಗುವವನಲ್ಲ. ಜನಪರ ಕೆಲಸ ಮಾಡುವುದೇ ನನ್ನ ಗುರಿ ಎಂಬ ಸಿದ್ದರಾಮಯ್ಯ ಮಾತಿಗೆ ನೆರೆದಿದ್ದ ಸಾವಿರಾರು ಜನರು ಚಪ್ಪಾಳೆ ಹೊಡೆದು, ಶಿಳ್ಳೆ, ಕೇಕೆ ಹಾಕಿದರು.
ಬೆಮೆಲ್ ಕಾಂತರಾಜು, ಮಾಜಿ ಶಾಸಕ ಕೆ.ಷಡಕ್ಷರಿ ಹಾಗೂ ಕುರುಬ ಸಂಘದ ಎಲ್ಲಾ ಪದಾಧಿಕಾರಿಗಳು, ಮುಖಂಡರು ಇದ್ದರು.
ಸುಮ್‌ಸುಮ್ನೆ ಈಶ್ವರಪ್ಪ, ಹೋರಾಟ ಮಾಡಪ್ಪ: ‘ಮಿಸ್ಟರ್ ಈಶ್ವರಪ್ಪ, ನಿನಗೆ ಕುರುಬರ ಮೇಲೆ ಕಾಳಜಿ ಇದ್ದರೆ ನಾನು ಕುಲಶಾಸ್ತ್ರ ಅಧ್ಯಯನ ನಡೆಸಿ ಕಳುಹಿಸಿರುವ ವರದಿಗೆ ಕೇಂದ್ರದಿಂದ ಒಪ್ಪಿಗೆ ಕೊಡಿಸಿ. ಈಶ್ವರಪ್ಪ ಕುರುಬರನ್ನು ಎಸ್‌ಟಿಗೆ ಸೇರಿಸಲು ಏಕೆ ಹೋರಾಟ ಮಾಡುತ್ತಿಲ್ಲ’ ಎಂದು ಸಿದ್ದರಾಮಯ್ಯ ಮೂದಲಿಸಿದರು. ಬೂಟಾಟಿಕೆ, ನಾಟಕವನ್ನು ರಾಜ್ಯದ ಕುರುಬರು ಅರ್ಥ ಮಾಡಿಕೊಂಡಿದ್ದಾರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಒಬಿಸಿಗೆ ಮೀಸಲಾತಿ ತಪ್ಪುವ ಆತಂಕವೇ ಎದುರಾಗಿದೆ. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವನಾಗಿ ನಿದ್ದೆ ಮಾಡಿದ್ದು ಒಬಿಸಿಗಳಿಗೆ ಅನ್ಯಾಯವಾಗಲಿದೆ ಎಂದು ದೂರಿದರು. ನಾವು ಮಾಡಿಸಿದ ಜಾತಿ ಸಮೀಕ್ಷೆ ವರದಿ ತೆಗೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ, ಈಗಲಾದರೂ ಪಡೆದು ಅದೇ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಮಿಸ್ಟರ್ ಈಶ್ವರಪ್ಪ ಎಸ್ಟಿ ಮೀಸಲಾತಿ ಕೊಡಿಸು: ಜೆಡಿಎಸ್, ಬಿಜೆಪಿ ಹಿಂದುಳಿದವರಿಗೆ ಸಿಎಂ ಮಾಡ್ತಾರಾ? ಸಾಮಾಜಿಕ ನ್ಯಾಯದ ಪರವಾಗಿರುವ ಕಾಂಗ್ರೆಸ್‌ಗೆ ಅಹಿಂದ ವರ್ಗದವರೆಲ್ಲಾ ಮತ ನೀಡಬೇಕು. ನಾನು ನಿಮ್ಮಪರವಾಗಿದ್ದರೆ ನನ್ನ ಪರವಾಗಿ ನೀವು ನಿಲ್ಲಬೇಕು, ಬಿಜೆಪಿ, ಜೆಡಿಎಸ್ ಬೂಟಾಟಿಕೆ, ನಾಟಕಗಳಿಗೆ ಕಿವಿಗೊಡಬೇಡಿ. ಇಡೀ ರಾಜ್ಯ ಸುತ್ತಿ ಹಣ ಸಂಗ್ರಹಿಸಿ ಕಾಗಿನೆಲೆ ಕನಕಪೀಠ ಗುರುಪೀಠ ಸ್ಥಾಪಿಸಿದೆವು, ಶಿವಮೊಗ್ಗದಲ್ಲಿ ನಡೆದ ಮೊದಲ ಸಭೆಗೆ ಈಶ್ವರಪ್ಪ ಕೂಡ ಬಂದಿದ್ದ, ಆದರೆ, ಹಣ ಕೊಡಬೇಕಾಗುತ್ತದೆ ಎಂದು ಎರಡನೇ ಸಭೆಗೆ ಬರಲೇ ಇಲ್ಲ, ಮಠದ ಉದ್ಘಾಟನೆಗೂ ಬರಲಿಲ್ಲ. ಮಿಸ್ಟರ್ ಈಶ್ವರಪ್ಪ ನಿನಗೆ ಕುರುಬರ ಬಗ್ಗೆ ಬದ್ಧತೆ ಇದ್ದರೆ ಕೇಂದ್ರ ಸರ್ಕಾರದ ಮುಂದೆ ಕುಳಿತುಕೊಂಡು ಎಸ್ಟಿ ಮೀಸಲಾತಿ ಕೊಡಿಸು ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಕಾಂಗ್ರೆಸ್‌ಗೆ ಸುರೇಶ್‌ಬಾಬು ಆಹ್ವಾನಿಸಿದ ಮಾಜಿ ಶಾಸಕ ರಾಜಣ್ಣ: ಸ್ವಾಗತ ಭಾಷಣದಲ್ಲಿ ಸುರೇಶ್‌ಬಾಬು ಹೆಸರು ಹೇಳಿಲ್ಲ ಎಂದು ಕೂಗಿದವರಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸ ಟಾಸ್ಕ್ ನೀಡಿದರು. ಸುರೇಶ್‌ಬಾಬುಗೆ ಜೆಡಿಎಸ್ ಬಿಟ್ಟು ಬರೋಕೇಳಿ, ಅಹಿಂದ ನಾಯಕ ಸಿದ್ದರಾಮಯ್ಯ ಹಿಂದೆ ಬಂದರಷ್ಟೇ ನಾವು ಅವರ ಹೆಸರು ಹೇಳೋದು. ನೀವು ಅವರನ್ನು ಕಾಂಗ್ರೆಸ್‌ಗೆ ಕರೆತನ್ನಿ ಎಂದು ಚಿಕ್ಕನಾಯಕನಹಳ್ಳಿಯಿಂದ ಬಂದಿದ್ದ ಕುರುಬ ಮುಖಂಡರಿಗೆ ಹೇಳಿದರು. ಸಿದ್ದರಾಮಯ್ಯ ಮುಂದುವರಿದ ಸಮುದಾಯಗಳ ವಿರೋಧಿಯಲ್ಲ, ಎಲ್ಲ ಜನರಿಗೂ ಅನ್ನಭಾಗ್ಯ, ಕ್ಷೀರಭಾಗ್ಯ, ಹಾಲಿಗೆ ಪ್ರೋತ್ಸಾಹಧನ ನೀಡಿದರು. ಬಿಜೆಪಿಯವರು ಅಹಿಂದ ವಿರೋಧಿಗಳು, ಮೀಸಲಾತಿ ವಿರೋಧಿಗಳು, ಬಡವರು ಬಡವರಾಗಿರಬೇಕು ಎಂಬುದೇ ಅವರ ಆರ್ಥಿಕ ನೀತಿ ಎಂದು ಹರಿಹಾಯ್ದರು. ಪಕ್ಷ ಮುಖ್ಯ ಅಲ್ಲ, ಬಡವರ ಪರವಾಗಿರುವ ವ್ಯಕ್ತಿಗೆ ನಮ್ಮ ಬೆಂಬಲ ನೀಡೋಣ, ವಂಚಿತ ಸಮುದಾಯಗಳಿಗೆ ಸಿದ್ಧರಾಮಯ್ಯ ಆಸ್ತಿಯಾಗಿದ್ದು, ಅವರಿಂದ ಉಪಕಾರ ಪಡೆದಿರುವ ದನಿ ಇಲ್ಲದ ಸಮುದಾಯಗಳು ಅವರ ಪರವಾಗಿರಬೇಕು, ಮುಂದಿನ ದಿನದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಕ್ಕಿರಬೇಕು ಎಂದು ಸಿದ್ದು ಪರವಾಗಿ ಬ್ಯಾಟ್ ಬೀಸಿದರು.
ಸಿದ್ದರಾಮಯ್ಯ ಕೈ ಬಲಪಡಿಸುವ ನಾಯಕರಿಗೆ ನಮ್ಮ ಬೆಂಬಲವಿರಬೇಕು, ಸುರೇಶ್‌ಬಾಬು ನಮ್ಮವನೇ ಆದರೂ, ಸಿದ್ದರಾಮಯ್ಯಗೆ ಬೆಂಬಲ ನೀಡಲಿ. ಸಿದ್ದರಾಮಯ್ಯ ಇಂದು ಕುರುಬರಿಗೆ ಸೀಮಿತವಾಗಿಲ್ಲ, ಅಹಿಂದ ವರ್ಗದ ಜನರ ಆಶಾಕಿರಣ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಸಿದ್ದರಾಮಯ್ಯ ಸಿಎಂ ಆಗಬೇಕು. ಸಿದ್ದರಾಮಯ್ಯ ಜನ್ಮದಿನವಾದ ಆ.3ರಂದು ದಾವಣಗೆರೆಯಲ್ಲಿ ಬೃಹತ್ ಅಹಿಂದ ಸಮಾವೇಶ ಆಯೋಜಿಸಲಾಗಿದೆ. -ಬೈರತಿ ಸುರೇಶ್ ಹೆಬ್ಬಾಳ ಶಾಸಕ ಬೇರೆ ಪಕ್ಷದಲ್ಲಿಯೂ ಕುರುಬರಿದ್ದಾರೆ. ಆದರೆ, ನಾಡಿಗೆ ಅವರ ಕೊಡುಗೆ ಏನು? ಬಿಜೆಪಿ ಒಬಿಸಿ ಮೀಸಲಾತಿ ತೆಗೆಯಲು ಹುನ್ನಾರ ನಡೆಸಿದೆ, ಅಹಿಂದ ವರ್ಗ ಎಚ್ಚೆತ್ತುಕೊಳ್ಳಬೇಕು. ದೇವರಾಜ ಅರಸು ಕಾರ್ಯಕ್ರಮ ವಿಸ್ತರಿಸಿದ್ದು ಸಿದ್ದರಾಮಯ್ಯ. ಆದರೆ, ಅವರ ಕಾರ್ಯಕ್ರಮಗಳನ್ನು ಬಿಜೆಪಿ ನಿಲ್ಲಿಸುತ್ತಿದೆ. ಕುರಿ ಸತ್ತರೆ ಪರಿಹಾರ ನೀಡುವ ಅನುಗ್ರಹ ಯೋಜನೆ ನಿಲ್ಲಿಸಿದ್ರು, ಅಭಿವೃದ್ಧಿಗಿಂತ ಜನರನ್ನು ಕೆರಳಿಸುವುದೇ ಬಿಜೆಪಿ ಅಜೆಂಡಾ ಆಗಿದೆ. ಸಿದ್ದರಾಮಯ್ಯ ಶಕ್ತಿ ಎಲ್ಲರಿಗೂ ಗೊತ್ತಿದ್ದು ಭಾರತದಲ್ಲಿಯೇ ಗಟ್ಟಿಯಾಗಿ ಮಾತನಾಡುವ ನಾಯಕ, ಮತ್ತಷ್ಟು ಶಕ್ತಿ ತುಂಬುವ ಕೆಲಸವಾಗಬೇಕು. -ಎಚ್.ಎಂ.ರೇವಣ್ಣ ಮಾಜಿ ಸಚಿವ ಮುಂದಿನ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ನವರ ಮಾತು ಕೇಳಬೇಡಿ, ನನಗೆ ಶಕ್ತಿ ನೀಡಲು ನೀವೆಲ್ಲಾ ಕಾಂಗ್ರೆಸ್ ಪರವಾಗಿರಬೇಕು. 2023ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಎಲ್ಲ ತಾಲೂಕುಗಳಲ್ಲಿ ಅರ್ಧಕ್ಕೆ ನಿಂತಿರುವ ಸಮುದಾಯ ಭವನಗಳನ್ನು ಪೂರ್ಣಗೊಳಿಸುತ್ತೇನೆ, ನಾನು ಅಧಿಕಾರಕ್ಕೆ ಬಂದರೆ ಎಲ್ಲ ಹಿಂದುಳಿದವರಿಗೆ ನ್ಯಾಯ ಕೊಡಿಸಲು ಹಿಂದೆ ಬೀಳಲ್ಲ, ಅಧಿಕಾರದಲ್ಲಿರದಿದ್ದರೂ ನಿಮ್ಮ ಪರವಾಗಿ ಇರುತ್ತೇನೆ. -ಸಿದ್ದರಾಮಯ್ಯ ವಿಪಕ್ಷ ನಾಯಕ, ಮಾಜಿ ಸಿಎಂ