

ಮೈಸೂರು: ಸಾಮಾಜಿಕ ಜಾಲತಾಣಗಳ ಬಳಕೆ ಹತೋಟಿಯಲ್ಲಿರಬೇಕು. ಇಲ್ಲವಾದರೆ ವಿದ್ಯಾರ್ಥಿಗಳ ಬದುಕಿನ ಪಥವೇ ಬದಲಾಗಬಹುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಚ್.ಕೆ.ಪಾಂಡು ಎಚ್ಚರಿಸಿದರು.
ಜೆಎಸ್‌ಎಸ್ ವಾಕ್ ಮತ್ತು ಶ್ರವಣ ವಿಭಾಗದಿಂದ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಶಾಲಾ ಶಿಕ್ಷಕರಿಗಾಗಿ ಆಯೋಜಿಸಿರುವ ‘ಮಕ್ಕಳಲ್ಲಿ ಶ್ರವಣೇಂದ್ರಿಯ ಪ್ರಕ್ರಿಯೆ: ಆನ್‌ಲೈನ್ ಬೋಧನೆಯ ಮಿತಿಗಳನ್ನು ಮೀರುವುದು’ ವಿಷಯ ಕುರಿತ ಮೂರು ದಿನಗಳ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಜಾಲತಾಣ, ಆನ್‌ಲೈನ್ ಬಳಕೆಯನ್ನು ಬಹುಎಚ್ಚರಿಕೆಯಿಂದ ಬಳಸಬೇಕು. ಆನ್‌ಲೈನ್ ವಿಷಯದಲ್ಲಿ ತಿಳಿದುಕೊಳ್ಳುವುದು ಬಹಳಷ್ಟು ಇದ್ದು, ಅದರ ಬಗ್ಗೆ ಶಿಕ್ಷಕರು ಅರಿವು ಮೂಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿದ್ದಾಗ ಮಾತ್ರ ಸದುಪಯೋಗಪಡಿಸಿಕೊಳ್ಳಲು ಪ್ರೇರೇಪಿಸಬೇಕು. ನಮ್ಮ ಕೆಲಸಗಳಿಗೆ ಸಮಾಜದಿಂದ ಪ್ರತಿಫಲದ ನಿರೀಕ್ಷೆ ಇರುತ್ತದೆ. ಹಾಗಾಗಿ, ಇಂತಹ ನಿರೀಕ್ಷೆಗಳನ್ನು ಸಾಮಾಜಿಕ ಮಾಧ್ಯಮಗಳು ಹುಸಿ ಮಾಡಬಾರದು ಎಂದರು.
ಕರೊನಾ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಸಂಪರ್ಕ ಸಾಧಿಸುವ ಸಾಧನವಾಗಿದ್ದ ಆನ್‌ಲೈನ್ ಕುರಿತು ಈಗ ಹೆಚ್ಚಿನ ಪ್ರೇರಣೆ ಇಲ್ಲ. ನೇರ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ.ರಾಜಶೇಖರ್ ಇತರರು ಇದ್ದರು.