

ಬಾಗಲಕೋಟೆ: ವಿದ್ಯಾರ್ಥಿಗಳು ಪರಿಶ್ರಮ ದೊಂದಿಗೆ ಸಾಧಿಸುವ ಛಲ ಮತ್ತು ಸಾಮಾಜಿಕ ಕಾಳಜಿಯನ್ನು ರೂಡಿಸಿಕೊಳ್ಳಬೇಕು , ಸಮಸ್ಯೆಗಳಿಗೆ ಎದೆಗುಂದದೆ ನಿರಂತರವಾಗಿ ಅಧ್ಯಯನ ಮಾಡಿ ಗುರಿಯನ್ನು ತಲುಪಬೇಕು ಎಂದು ರಾಜಸ್ಥಾನದ ಶ್ರೀಗಂಗಾನಗರದ ಹೆಚ್ಚುವರಿ ಎಸ್ಪಿ ಹಾಗೂ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹಳೆ ವಿದ್ಯಾರ್ಥಿ ಶ್ರೀ ರಮೇಶ್ ಗುಮಗೇರಿ ಹೇಳಿದರು.
ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತಿಸಿ ನೂತನ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವಿಭಾಗದ ಮುಖ್ಯಸ್ಥರಾದ ಡಾ. ವಿನಯ್ ಕುಪ್ಪಸ್ತ ಅವರು ವಿದ್ಯಾರ್ಥಿಗಳು ವಿಭಾಗದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಬದಲಾಗುತ್ತಿರುವ ತಂತ್ರಜ್ಞಾನದ ಕೌಶಲ್ಯಗಳನ್ನು ಅಧ್ಯಯನ ಮಾಡಿ ಉತ್ತಮ ನಾಗರಿಕರಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಮೇಶ್ ಗುಮಗೇರಿ ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದು ನಿರಂತರ ಪರಿಶ್ರಮವಹಿಸಿ ಅಧ್ಯಯನ ಮಾಡಿ ದೇಶದ ಪ್ರತಿಷ್ಠಿತ ಐಪಿಎಸ್ ಪರೀಕ್ಷೆ ಪಾಸಾಗಿ ಕಾಲೇಜಿಗೆ ಮತ್ತು ವಿಭಾಗಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು. ಮೆ.ಇಂ. ಅಸೋಸಿಯೇಷನ್ ಸಂಯೋಜಕ ಪ್ರೊ. ಗೋಪಿನಾಥ ರಾಠೋಡ ಅವರು 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯ ಯೋಜನೆಗಳನ್ನು ಹೇಳಿದರು. ಪ್ರೊ.ಬಿ. ಆರ್ .ಎಂಡಿಗೇರಿ ಅತಿಥಿಗಳನ್ನು ಪರಿಚಯಿಸಿದರು.ಕು.ಬಸವರಾಜ ಸ್ವಾಗತಿಸಿದರು, ಹಾಗೂ ಕು.ಸೂರಜ್ ವಂದಿಸಿದರು.