ಸಾಮಾಜಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದ್ದ ಅರಸು: ಡಾ.ಡಿ.ತಿಮ್ಮಯ್ಯ ಬಣ್ಣನೆ

19
Published on

ಮೈಸೂರು: ಸಮಾಜದ ಅನಿಷ್ಟ ಪದ್ಧತಿಗಳಾದ ಮಲ ಹೊರುವ ಪದ್ಧತಿ, ಜೀತಗಾರಿಕೆಯಂತಹ ಸಾಮಾಜಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಬಣ್ಣಿಸಿದರು.
ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್‌ನಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಭಾನುವಾರ ಅಯೋಜಿಸಿದ್ದ ಡಿ.ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆ ಮತ್ತು ಸಾಧಕರಿಗೆ ‘ಧ್ವನಿ ಕೊಟ್ಟ ದಣಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರಾಜ ಅರಸು ಅವರು ಸಾಮಾಜಿಕ, ಆರ್ಥಿಕ ಆರೋಗ್ಯಕ್ಕೆ ಶ್ರಮಿಸಿದ ವ್ಯಕ್ತಿ. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದವರು. ಉಳುವವನೆ ಹೊಲದೊಡೆಯ ಕಾಯ್ದೆ ಮಾಡಿ ಒಂದು ರೀತಿಯ ಆರ್ಥಿಕ ಜೀತದಲ್ಲಿದ್ದ ರೈತರನ್ನು ವಿಮೋಚನೆಗೊಳಿಸಿದವರು ಎಂದರು.
ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುವುದು ಮಾತ್ರ ಮನುಷ್ಯನ ಆರೋಗ್ಯವಲ್ಲ. ಆತ ಸಾಮಾಜಿಕ, ಆರ್ಥಿಕವಾಗಿಯೂ ಉತ್ತಮವಾಗಿರುವುದು ಮುಖ್ಯ. ಆಗ ಮಾತ್ರ ಸಮಾಜದಲ್ಲಿ ಸುಭಿಕ್ಷೆ ಎನ್ನುವುದು ಇರಲು ಸಾಧ್ಯ. ಇಂತಹ ವ್ಯವಸ್ಥೆ ಸೃಷ್ಟಿ ಮಾಡಿದವರು ದೇವರಾಜ ಅರಸು ಎಂದು ಬಣ್ಣಿಸಿದರು.
ಅತಿ ಹಿಂದುಳಿದ ಸಮಾಜದಲ್ಲಿ ಸರ್ಕಾರಿ ಹುದ್ದೆ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತವರಿಗೆ ಮೀಸಲಾತಿ ಮೂಲಕ ಉದ್ಯೋಗ ನೀಡಲು ಸಹಕರಿಸಿದರು. ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಧರ್ಮಸಿಂಗ್, ವಿಶ್ವನಾಥ್ ಇನ್ನು ಅನೇಕ ತಳ ಸಮುದಾಯದ ನಾಯಕರನ್ನು ಬೆಳೆಸಿದರು. ದಲಿತರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು. ಇಂತಹ ಮಹಾನ್ ವ್ಯಕ್ತಿಯಿಂದ ನಾನೂ ಓದಿ, ಉದ್ಯೋಗ ಪಡೆಯುವಂತಾಯಿತು. ಅವರ ಹೆಸರಿನಲ್ಲಿ ಭವನ, ವೃತ್ತ ನಿರ್ಮಿಸಿ, ಪ್ರತಿಮೆ ಸ್ಥಾಪಿಸಲು ಸೂಕ್ತ ಜಾಗ ಗುರುತಿಸಿದರೆ ಸಹಕಾರ ಕೊಡುವುದಾಗಿ ಹೇಳಿದರು.
ಕಾಂಗ್ರೆಸ್ ವಕ್ತಾರ ಎಚ್.ಎ.ವೆಂಕಟೇಶ್ ಮಾತನಾಡಿ, ದೇವರಾಜ ಅರಸು ಮುಖ್ಯಮಂತ್ರಿಯಾಗಿ 51 ವರ್ಷಗಳೇ ಕಳೆದಿದೆ. ಆದರೆ ಇಂದಿಗೂ ಜನರು ಅವರನ್ನು ಸ್ಮರಿಸುವುದಕ್ಕೆ ಅವರ ಮಾತೃ ಹೃದಯದಿಂದ ಮಾಡಲ್ಪಟ್ಟ ಕೆಲಸಗಳು ಕಾರಣ ಎಂದರು.
ದೇವರಾಜ ಅರಸು ಪ್ರಜಾಪ್ರಭುತ್ವವನ್ನು ಆಳಿದ ಅರಸು. ಜನಮನ ಗೆದ್ದ ಕಾರ್ಯಕ್ರಮಗಳನ್ನು ನೀಡಿದ ನಾಯಕ. ಅವರ ಯೋಜನೆಗಳನ್ನು ಹೊರ ರಾಜ್ಯದ ಆಡಳಿತಗಾರರು ಅನುಸರಿಸುತ್ತಿದ್ದರು. ಆದರೀಗ ಕೇವಲ ತೋರಿಕೆ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಕರ್ನಾಟಕದಲ್ಲಿ ಹಿಂದುಳಿದವರಿಗೆ ನೀಡಲಾದ ಮೀಸಲಾತಿ ಅಸಮರ್ಪಕವಾಗಿದೆ. ಉಳ್ಳವರಿಗೆ ಮೀಸಲಾತಿ ನೀಡುವುದು ಮೀಸಲಾತಿ ವ್ಯವಸ್ಥೆಗೆ ಮಾಡುವ ಅವಮಾನವಾಗಿದೆ. ದೇವರಾಜ ಅರಸು ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನೀತಿ ಹೊಂದಿದ್ದರು. ಆನಂತರ ಬಂದ ಯಾವ ರಾಜಕಾರಣಿಗಳಿಗೂ ಮೀಸಲಾತಿ ವಿಷಯದಲ್ಲಿ ಸದೃಢ ನಿಲುವು ಸಾಧ್ಯವಾಗಿಲ್ಲ. ಈಗ ಸಿದ್ದರಾಮಯ್ಯ ಅವರು ಜಾತಿ ಆಧಾರಿತ ಮೀಸಲಾತಿ ಮಾಡುತ್ತೇವೆ ಎಂದಿರುವುದು ಉತ್ತಮ ಬೆಳವಣಿಗೆ. ಅರಸು ಆಡಳಿತಕ್ಕೆ ಇದು ಸಾಮ್ಯತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ವಾಂಸ ಎಂ.ಎಂ.ನಾಗರಾಜಪ್ಪ, ಸುಗಮ ಸಂಗೀತ ಗಾಯಕ ಎಸ್.ಸಾಂಬಮೂರ್ತಿ, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಧಾಕೃಷ್ಣ ರಾಮರಾವ್, ಲೆಕ್ಕ ಪರಿಶೋಧಕ ಪಿ.ಸುಂದರ್, ಅಂಚೆ ಇಲಾಖೆ ಸಿ.ಆರ್.ರಂಗಸ್ವಾಮಿ, ಯೋಗ ಗುರು ನಂಜುಂಡರಾಜೇ ಅರಸ್ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ತವರು ಅರಸು ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್, ಅನ್ವೇಷಣಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್ ಅರಸ್, ಶತಮಾನೋತ್ಸವ ಸಂಭ್ರಮದ ಅರಸು ಸಂಘದ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಸಂಗೀತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net