

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಬೆಂಡಿಗಾನಹಳ್ಳಿಯಲ್ಲಿ ಶಾಸಕ ಶರತ್ ಬಚ್ಚೇಗೌಡ ಕುಟುಂಬಸ್ಥರು, ಅಭಿಮಾನಿ ಕಾರ್ಯಕರ್ತರು ಹಾಗೂ ಮುಖಂಡರ ಜತೆ ಸೋಮವಾರ ಜನ್ಮದಿನ ಆಚರಿಸಿಕೊಂಡರು.
ಸ್ವಗ್ರಾಮ ಬೆಂಡಿಗಾನಹಳ್ಳಿಯಲ್ಲಿ ಅಭಿಮಾನಿಗಳು ಶರತ್ ಬಚ್ಚೇಗೌಡ ಅವರನ್ನು ಹೊತ್ತು ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಹಾರ ತುರಾಯಿ ಬದಲು ಪಠ್ಯ ಪರಿಕರ: ಜನ್ಮದಿನಕ್ಕೂ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಶರತ್ ಬಚ್ಚೇಗೌಡ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ಹಾರ ತುರಾಯಿ ಬದಲು ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪರಿಕರ ನೀಡುವಂತೆ ಕರೆ ನೀಡಿದ್ದರು. ಅದರಂತೆ ಶುಭಕೋರಲು ಬಂದವರು ನೋಟ್ ಪುಸ್ತಕದ ಬಂಡಲ್‌ಗಳು, ಪೆನ್, ಶಾಲಾ ಬ್ಯಾಗ್ ಸೇರಿ ವಿವಿಧ ಪಠ್ಯಪರಿಕರ ತಂದು ವಿತರಿಸಿದರು.
ಇದಕ್ಕೂ ಮೊದಲು ಮನೆ ದೇವರಾದ ವಿಜಯಪುರದ ಶ್ರೀ ಸೌಮ್ಯ ಕೇಶವಸ್ವಾಮಿ ದೇವಾಲಯಕ್ಕೆ ಶಾಸಕರು ಕುಟುಂಬಸ್ಥರೊಂದಿಗೆ ತೆರಳಿ ಪೂಜೆ ಸಲ್ಲಿಸಿದರು.
80 ಸಾವಿರ ಲಡ್ಡು ವಿತರಣೆ: ಶಾಸಕರ ಜನ್ಮದಿನದ ಸಿಹಿ ಹಂಚಲು ದಾನಿಗಳು ನಗರದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ 80 ಸಾವಿರ ಲಡ್ಡು ತಯಾರಿಸಿ, ತಾಲೂಕಿನ ಎಲ್ಲ ಶಾಲೆ ಹಾಗೂ ಅಂಗನವಾಡಿಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪಾರ್ಸಲ್ ಮಾಡಿ ವಿತರಿಸಿದರು. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ: ಶಾಸಕ ಶರತ್ ಬಚ್ಚೇಗೌಡರ ಜನ್ಮದಿನಾಚರಣೆ ಸಂದರ್ಭದಲ್ಲಿ ಬೆಂಡಿಗಾನಹಳ್ಳಿಯಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಕಾರ್ಯಕರ್ತರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಚಂದ್ರಶೇಖರನಾಥ ಸ್ವಾಮೀಜಿ ನೀಡಿರುವ ಹೇಳಿಕೆಯು ಕಾನೂನು ವಿರುದ್ಧವಾಗಿದ್ದರೂ ಅದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ, ಯಾರೋ ದೂರು ನೀಡಿರುವ ಕಾರಣ ಎ್ಐಆರ್ ಆಗಿದೆ, ಈ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ನಡೆಯುತ್ತಿರುವ ಮಾತ್ರಕ್ಕೆ ಅವರನ್ನು ಬಂಧಿಸುವ ಪ್ರಮೇಯ ಬರುವುದಿಲ್ಲ. ಶರತ್ ಬಚ್ಚೇಗೌಡ ಶಾಸಕ
ಬಿಜೆಪಿ ಒಳಜಗಳ ಪರಿಹರಿಸಿಕೊಳ್ಳಲಿ
ವಿಜಯಪುರ: ಬಿಜೆಪಿಯವರು ಅವರ ಪಕ್ಷದ ಒಳಜಗಳ ಪರಿಹರಿಸಿಕೊಂಡು ನಂತರ ಬೇರೆ ವಿಷಯಗಳಿಗೆ ತಲೆಹಾಕಲಿ. ಅವರ ಪಕ್ಷದಲ್ಲೀಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಆದರೂ ಅನವಶ್ಯಕವಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಕಿಡಿಕಾರಿದರು.
ಮನೆಯ ದೇವರು ಶ್ರೀ ಚನ್ನಕೇಶವ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.5 ರಂದು ಕಾಂಗ್ರೆಸ್ ಸಮಾವೇಶ ನಡೆಯಲಿದ್ದು, ಕಾಂಗ್ರೆಸ್ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಗ್ಯಾರಂಟಿ ಸೌಲಭ್ಯ ಒದಗಿಸಿರುವ ಸಂತೋಷಕ್ಕಾಗಿ ಸಮಾವೇಶ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಲ್ಲ ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಎಂ.ಸತೀಶ್‌ಕುಮಾರ್, ಮಾಜಿ ಸದಸ್ಯರಾದ ಸಂಪತ್ ಕುಮಾರ್, ಮುನಿಚಿನ್ನಪ್ಪ, ರಮೇಶ್, ರವೀಶ್, ದೊಡ್ಡ ತತ್ತಮಂಗಲ ನಾರಾಯಣಸ್ವಾಮಿ, ಶ್ರೀ ಸೌಮ್ಯ ಕೇಶವಸ್ವಾಮಿ ದೇವಾಲಯದ ಅರ್ಚಕರಾದ ಮುರಳೀಧರ್ ಭಟ್ಟಾಚಾರ್ಯ ರಾಜು, ರಥೋತ್ಸವ ಸಮಿತಿಯ ಮನೋಹರ್ ಉಪಸ್ಥಿತರಿದ್ದರು.