

ಚಿತ್ರದುರ್ಗ: ಮಾಧ್ಯಮಗಳು ನೀಡುವ ಸುದ್ದಿಗಳನ್ನು ಇಂದಿಗೂ ಜನ ನಂಬಿದ್ದಾರೆ. ಹೀಗಾಗಿ ಸಾಮಾಜಿಕ ಕಳಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಕುಡಾ ಕಚೇರಿ ಬಳಿ ಬಿಸಿ ಸುದ್ದಿ ಬಳಗದಿಂದ ‘ಮುದ್ರಣ, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಸಮಾಜಮುಖಿ ಚಿಂತನೆ ಮತ್ತು ಅಪಾಯ’ ಕುರಿತು ಶನಿವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಸಾನಿಧ್ಯವಹಿಸಿ ಮಾತನಾಡಿದರು.
ಹಲವರಿಗೆ ಯಶಸ್ಸು ಪ್ರಧಾನ ಆಗುತ್ತಿದೆ. ಹೇಗಾದರೂ ಹಣ, ಕೀರ್ತಿ ಗಳಿಸಬೇಕು ಎಂಬ ಭಾವನೆ ಹೆಚ್ಚುತ್ತಿದೆ. ಇದು ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಆದ್ದರಿಂದ ಒಳ್ಳೆಯ ಕಾರ್ಯ ಮಾಡುತ್ತ ಸಾಗಿದರೆ, ಎರಡೂ ಸನ್ಮಾರ್ಗದಲ್ಲೇ ದೊರೆಯಲಿದೆ. ಈ ಕುರಿತು ಚಿಂತಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಮಾಧ್ಯಮ ಸೇರಿ ಯಾವ ಕ್ಷೇತ್ರವೇ ಆಗಲಿ ಸತ್ಯ, ನ್ಯಾಯದ ಪರವಿರಬೇಕು. ಆದರೆ, ಬದಲಾಗದ ಸ್ಥಿತಿಗೆ ಕೆಲ ಮಾಧ್ಯಮಗಳು ತಲುಪಿದ್ದು, ತೇಜೋವಧೆಯನ್ನೇ ಗುರಿಯಾಗಿಸಿಕೊಂಡಿವೆ. ಇದು ಉತ್ತಮ ಬೆಳವಣಿಗೆಯಲ್ಲ. ಪತ್ರಕರ್ತರೂ ಆತ್ಮವಂಚನೆಗೆ ಮುಂದಾಗುವುದು ಸರಿಯಲ್ಲ ಎಂದ ಅವರು, ಹೋರಾಟವೇ ಬದುಕು. ಆದರಿಂದು ವ್ಯಕ್ತಿ ಹೋರಾಟವಾಗಿ ಬದಲಾದ ನಂತರ ಅದರಲ್ಲೂ ಹಣ, ಸ್ವಾರ್ಥ ಮುಖ್ಯವಾಗುತ್ತಿದೆ ಎಂದು ಬೇಸರಿಸಿದರು.
ಜಿಲ್ಲಾ ನೀರಾವರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಎಲ್ಲ ಕ್ಷೇತ್ರಗಳು ಯಶಸ್ಸಿನತ್ತ ಸಾಗಲು ವ್ಯಾಪಾರೀಕರಣ ಆಗಿವೆ. ಹಣ ಗಳಿಕೆ ಮುಖ್ಯವಾಗಿರುವ ಕಾರಣ ಅಡ್ಡ ಮಾರ್ಗದ ಪ್ರವೃತ್ತಿಯೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ಮುದ್ರಣ ಮಾಧ್ಯಮ ನಡೆಸುವುದು ಕಷ್ಟಕರವಾಗಿದೆ. ಈ ನಡುವೆಯೂ ಮೌಲ್ಯ ಕಾಪಾಡಬೇಕಾದ ಜವಾಬ್ದಾರಿ ಇದೆ. ಪತ್ರಕರ್ತರು ಎಂದಿಗೂ ಅಧಿಕಾರಸ್ಥರ ಮನೆ ಬಾಗಿಲು ಕಾಯಬಾರದು. ವೃತ್ತಿ ಧರ್ಮ ಕಾಪಾಡದವರು ಹಣ, ಹೆಸರು ಗಳಿಸಿದರೂ ಯಾವ ಪ್ರಯೋಜನವಿಲ್ಲ ಎಂದರು.
ಕಾಯಕ ನಿಷ್ಠೆ ಕಣ್ಮರೆಯಾಗುತ್ತಿದೆ. ಆದರೆ, ಸಾಮಾಜಿಕ ಕಳಕಳಿ, ಮೌಲ್ಯ ನಿಷ್ಠೆಯೊಂದೇ ಶಾಶ್ವತವಾಗಿ ಉಳಿಯಲಿದೆ ಎಂಬುದನ್ನು ಮರೆಯಬಾರದು. ಪತ್ರಕರ್ತ ಸಮಾಜಕ್ಕೆ ವಿದ್ಯೆ ಕಲಿಸುವ ಗುರುವಾಗಿದ್ದು, ಆ ನಿಟ್ಟಿನಲ್ಲೇ ಸಾಗಬೇಕು ಎಂದು ಸಲಹೆ ನೀಡಿದರು.
ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಮಧ್ಯ ಕರ್ನಾಟಕ ಭಾಗದಲ್ಲಿ ಜ್ವಲಂತ ಸಮಸ್ಯೆ ಇದ್ದು, ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸಿ ಪರಿಹಾರ ಕಂಡುಕೊಳ್ಳಲು ಮಾಧ್ಯಮಗಳು ಮುಂದಾಗಬೇಕು. ಚಿತ್ರದುರ್ಗ ಜಿಲ್ಲೆ ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ, ಪತ್ರಕರ್ತರ ಜವಾಬ್ದಾರಿ ಇದೆ ಎಂದರು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಎಚ್.ಅಂಜಿನಪ್ಪ, ವಕೀಲ ಪ್ರತಾಪ್‌ಜೋಗಿ, ಪತ್ರಕರ್ತ ಚಳ್ಳಕೆರೆ ಬಸವರಾಜ್ ಇತರರಿದ್ದರು.