

ಶಾಮಸುಂದರ ಕುಲಕರ್ಣಿ ಕಲಬುರಗಿ
ಕರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಣ್ಣಿ ಮಾರುಕಟ್ಟೆಯನ್ನು ಜೇವರ್ಗಿ ರಸ್ತೆಯ ವಾಜಪೇಯಿ ಲೇಔಟ್ಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ವಿಶಾಲ ಸ್ಥಳ ಇರುವುದರಿಂದ ಶಿಸ್ತು ಬದ್ಧವಾಗಿ ಮಾರಾಟ-ಖರೀದಿಗೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅನುವು ಮಾಡಿಕೊಟ್ಟಿದ್ದು, ಸಾಮಾಜಿಕ ಅಂತರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಪ್ರತಿಯೊಬ್ಬ ವ್ಯಾಪಾರಿ ನಡುವೆ ಅಂತರ ಕಾಯ್ದಿರಿಸಲಾಗಿದೆ. ತರಕಾರಿ ಮಾರಲು ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ಖರೀದಿಸುವವರು ಕೂಡ ಅಂತರ ಕಾಪಾಡುವಂತೆ ಸ್ಥಳದಲ್ಲಿರುವ ಪೊಲೀಸರು ಎಚ್ಚರಿಸುತ್ತಿದ್ದಾರೆ.
ಕಣ್ಣಿ ಮಾರುಕಟ್ಟೆ ಅಫಜಲಪುರಕ್ಕೆ ಹೋಗುವ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು. ಅಲ್ಲದೆ ವ್ಯಾಪಾರಿಗಳು ರಸ್ತೆ ಪಕ್ಕ ಕುಳಿತು ವಹಿವಾಟು ನಡೆಸುತ್ತಿದ್ದರಿಂದ ಜನಸಂದಣಿ ಕಾಣುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಎಲ್ಲೂ ಜನಸಂದಣಿ ಸೇರಬಾರದು ಎಂಬ ಉದ್ದೇಶ ಮತ್ತು ಕೊಡು-ಕೊಳ್ಳುವಿಕೆ ವೇಳೆ ಸಾಮಾಜಿಕ ಅಂತರ ಸಾಧ್ಯವಾಗದೆ ಸೋಂಕು ವ್ಯಾಪಿಸುವ ಸಾಧ್ಯತೆ ಹೆಚ್ಚಿದ್ದರಿಂದ ಇಲ್ಲಿನ ವಹಿವಾಟು ಸ್ಥಗಿತಗೊಳಿಸಿ ವಾಜಪೇಯಿ ಲೇಔಟ್ಗೆ ಶಿಫ್ಟ್ ಮಾಡಿದ್ದು ಒಳ್ಳೆಯ ನಿರ್ಧಾರ ಎನಿಸಿದೆ.
ವಾಜಪೇಯಿ ಲೇಔಟ್ನಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳ ಮಧ್ಯೆ ಸಾಮಾಜಿಕ ಅಂತರ ಕಾಪಾಡುವಂತೆ ಎಚ್ಚರ ವಹಿಸಲಾಗಿದೆ. ಹಳ್ಳಿಗಳಲ್ಲಿ ತರಕಾರಿ ಬೆಳೆದ ರೈತರು ನೇರವಾಗಿ ವಾಜಪೇಯಿ ನಗರಕ್ಕೆ ಬಂದು ವಹಿವಾಟು ನಡೆಸುತ್ತಿದ್ದಾರೆ.
ಕರೊನಾ ಲಾಕ್ಡೌನ್ನಿಂದಾಗಿ ತರಕಾರಿ ಬೆಳೆದ ರೈತರು ಸಂಕಷ್ಟದಲ್ಲಿದ್ದರು. ಈಗ ವಾಜಪೇಯಿ ನಗರದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸಹಕಾರ ನೀಡಿದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಆಯುಕ್ತರ ಸೂಚನೆಯಂತೆ ವಾಜಪೇಯಿ ಬಡಾವಣೆಯಲ್ಲಿ ಆರಂಭಿಸಿರುವ ತರಕಾರಿ ಮಾರುಕಟ್ಟೆಯಲ್ಲಿ ಸುವ್ಯವಸ್ಥೀತವಾಗಿ ಮಾರಾಟಕ್ಕೆ ಅನುಕುಮಾಡಿಕೊಡಲಾಗಿದೆ. ಪೊಲೀಸ್ ಅಧಿಕಾರಿಗಳಾದ ರಮೇಶ ಕಾಂಬಳೆ, ಭಾರತಿಬಾಯಿ ನೇತೃತ್ವದಲ್ಲಿ ಸಂಚಾರಿ ಪೊಲೀಸರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತರಕಾರಿ ಹರಾಜ ಮಾಡಲು ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ಮಾರಾಟಗಾರರಿಗೂ ಮತ್ತು ಖರೀದಿಸುವ ಸಾರ್ವಜನಿಕರಿಗೂ ಸಮಸ್ಯೆ ಆಗದಂತೆ ನಿಗಾವಹಿಸಲಾಗಿದೆ.
| ವೀರೇಶ ಕರಡಿಗುಡ್ಡ, ಸಂಚಾರ ವಿಭಾಗದ ಎಸಿಪಿ