ಸಾಮರಸ್ಯದಿಂದ ಬದುಕಿದರೆ ಸಮಾಜದಲ್ಲಿ ಶಾಂತಿ ನಿರ್ಮಾಣ

07-3
ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿ ದಸರಾ ಮಹೋತ್ಸವದ ಸೀಮೋಲ್ಲಂಘನ ಜರುಗಿತು. ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ, ಡಾ. ಚಂದ್ರಶೇಖರ ಕಂಬಾರ, ಡಾ. ಸರಜೂ ಕಾಟ್ಕರ್, ಬಾಲಶೇಖರ ಬಂದಿ ಇತರರಿದ್ದರು.
Published on

ಗೋಕಾಕ, ಬೆಳಗಾವಿ: ಜಾತಿ, ಧರ್ಮ, ಮತಗಳ ಕಲಹದಲ್ಲಿ ಜಗತ್ತು ವಿನಾಶದತ್ತ ಸಾಗುತ್ತಿದೆ. ಸಮಾಜಕ್ಕೆ ಬೇಕಾಗಿರುವುದು ಸಾಮರಸ್ಯದ ಶಾಂತಿಯ ಮಂತ್ರ ಎಂದು ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹೇಳಿದರು.

ತಾಲೂಕಿನ ಸಾವಳಗಿ ಶ್ರೀ ಶಿವಲಿಂಗೇಶ್ವರ ಪೀಠದಲ್ಲಿ ಬುಧವಾರ ಜರುಗಿದ ದಸರಾ ಉತ್ಸವದ ಸೀಮೋಲ್ಲಂಘನದಲ್ಲಿ ಅವರು ಮಾತನಾಡಿ, ಧರ್ಮ ನಿರಪೇಕ್ಷ ಸಮಾಜ ಕಟ್ಟಬೇಕಾಗಿದೆ ಎಂದರು. ಸಾವಳಗಿಯ ಶಿವಲಿಂಗೇಶ್ವರರು 17ನೇ ಶತಮಾನದಲ್ಲಿ ಹಿಂದು-ಮುಸ್ಲಿಂ ಸಾಮರಸ್ಯ ಸಂದೇಶ ನೀಡಿದವರು. ಅಂತಹ ಸಾಮರಸ್ಯ ಇಂದಿಗೂ ಉಳಿದಿರುವುದು ಪೀಠದ ವಿಶೇಷ. ತಂತ್ರಜ್ಞಾನ ಬೆಳವಣಿಗೆಯಲ್ಲಿ ಸಾಹಿತ್ಯವು ಕಲಬೆರಕೆ ಆಗುತ್ತಿದೆ. ಶಾಶ್ವತವಾಗಿ ಉಳಿಯುವ ಗುಣಧರ್ಮ ಹೊಂದಿರುವ ಸಾಹಿತ್ಯವನ್ನು ಇತರ ಮಾಧ್ಯಮಗಳೊಂದಿಗೆ ಕಲಬೆರಕೆ ಮಾಡಬಾರದು. ಸಾಹಿತ್ಯದ ಪಾವಿತ್ರ್ಯ ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿ ಮಾತನಾಡಿ, ಜಾತಿ, ಮತ, ಪಂಥ ಎನ್ನದೆ ಭಾವೈಕ್ಯ ಇದ್ದಲ್ಲಿ ಪರಮಾತ್ಮನ ಸಾಕ್ಷಾತಾರದ ಕೃಪೆಯಾಗುವುದು. ಸತ್ಯ, ಶುದ್ಧತೆ, ಪ್ರಾಮಾಣಿಕತೆ ಮತ್ತು ನಿಜ ಭಕ್ತಿಯು ಇಂದಿನ ಅವಶ್ಯಕತೆ ಆಗಿದ್ದು, ಸನ್ಮಾರ್ಗದಲ್ಲಿ ನಡೆಯುವ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸರಜೂ ಕಾಟ್ಕರ್ , ಸಂಚಾಲಕ ಬಾಲಶೇಖರ ಬಂದಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net