ಸಾಮರಸ್ಯದ ಬದುಕಿಗೆ ಜಾನಪದ ಸಹಕಾರಿ

CTD JANAPAD..
Published on

ಚಿತ್ರದುರ್ಗ: ಸಾಮರಸ್ಯದ ಬದುಕಿಗೆ ಜಾನಪದ ಕಲೆಗಳು ಸಹಕಾರಿಯಾಗಿವೆ ಎಂದು ರಂಗ ವಿಮರ್ಶಕ ಡಾ.ಬಸವರಾಜ್ ಹೇಳಿದರು.

ಕಾಲ್ಕೆರೆ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಶನಿವಾರ ಮದಕರಿ ಪುರದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಜಾನಪದ ಸಂಭ್ರಮ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆಗಳು ನಶಿಸುತ್ತಿವೆ. ಸೋಬಾನೆ ಪದ, ರಂಗ ಗೀತೆ, ಭಾವ ಗೀತೆ, ದಾಸರ ಪದಗಳನ್ನು ಹಾಡುವವರು ಇಲ್ಲವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಇವುಗಳನ್ನು ಪರಿಚಯಿಸಬೇಕಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ನುಂಕಪ್ಪ ಮಾತನಾಡಿ, ಜಾಗತೀಕರಣ, ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಉತ್ತಮ ಕಲೆಗಳು ನಾಶದಂಚಿಗೆ ತಲುಪುತ್ತಿವೆ. ಜಾನಪದ ಕಲೆಗಳು ಸುಪ್ತ ಪ್ರತಿಭೆ ಅನಾವರಣಕ್ಕೆ ನೆರವಾಗಿವೆ ಎಂದು ತಿಳಿಸಿದರು.

ಕಡ್ಲೆಗುದ್ದು ಪ್ರೌಢಶಾಲೆ ಮುಖ್ಯಶಿಕ್ಷಕ ಡಾ.ಮಹೇಶ್, ವಕೀಲ ಡಾ.ಎಂ.ಸಿ. ನರಹರಿ, ಕಿರಣ್ ಕುಮಾರ್ ಜೈನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಪ್ಪ ಹುಲ್ಲೂರು, ಕೊಳಲು ವಾದಕ ಗುರುರಾಜ್ ಇದ್ದರು.

ತ್ರಿವೇಣಿ, ಬಡಾವಣೆ ಠಾಣೆ ಪಿಎಸ್‌ಐ ಯಶೋದಾ, ಹರೀಶ್, ಜಾನಪದ ಗೀತೆಗಳ ಗಾಯನ ಕಾರ‌್ಯಕ್ರಮ ನಡೆಸಿಕೊಟ್ಟರು. ಸೋಬಾನೆ ಪದ, ಗೀಗೀ ಪದ, ಜಾನಪದ, ರಂಗ ಕಲಾವಿದರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net