ಸಾಮರಸ್ಯ, ಶಿಕ್ಷಣ, ಆರೋಗ್ಯ ಆದ್ಯತೆಯಾಗಲಿ

law
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ದೇಶದ ಎಲ್ಲ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ಕಲ್ಪಿಸುವುದು ಮತ್ತು ಸಾಮರಸ್ಯ ಕಾಪಾಡುವುದು ಸರ್ಕಾರಗಳ ಆದ್ಯತೆಯಾಗಬೇಕು ಎಂದು ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕ್ ಹೇಳಿದರು.

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಸಭಾಭವನದಲ್ಲಿ ಕೆಎಲ್​ಇ ಸಂಸ್ಥೆಯ ಜಿ.ಕೆ. ಕಾನೂನು ಮಹಾವಿದ್ಯಾಲಯ ಶನಿವಾರ ಆಯೋಜಿಸಿದ್ದ ‘ನ್ಯಾಯಾಂಗದಲ್ಲಿ ವೃತ್ತಿಜೀವನ’ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ‘ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ’ ಕುರಿತು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮದು ಜಾತ್ಯತೀತ ರಾಷ್ಟ್ರ. ಪ್ರತಿಯೊಂದು ರಾಜ್ಯಗಳಲ್ಲಿ ಭಾಷೆ, ಧರ್ವಚರಣೆ ಭಿನ್ನವಾಗಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಧರ್ವಚರಣೆ ಮಾಡಲು ಸ್ವತಂತ್ರರು. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ದೇಶಕ್ಕೆ ಸ್ವಾತಂತ್ರ್ಯಂದು 75 ವರ್ಷಗಳು ಕಳೆದಿದ್ದು, ಈ ಸಂದರ್ಭದಲ್ಲಿ ನಮ್ಮ ಯಾವ ಕನಸುಗಳಿಗೆ ಪ್ರಾಧಾನ್ಯತೆ ಸಿಗಬೇಕು ಎಂಬುದು ಮಹತ್ವ ಪಡೆಯುತ್ತದೆ ಎಂದರು.

ಎಐ ಪರಿಣಾಮಕಾರಿ ಆಗಲಾರದು:

ಯಾವುದೇ ಯಂತ್ರ, ತಂತ್ರಜ್ಞಾನವು ಮನುಷ್ಯನ ಬುದ್ಧಿಶಕ್ತಿ (ಮಿದುಳು)ಯ ಸ್ಥಾನವನ್ನು ತುಂಬಲಾರದು. ನ್ಯಾಯಾಲಯದ ತೀರ್ಪಗಳನ್ನು ಪ್ರಾದೇಶಿಕ ಭಾಷೆಗೆ ಅನುವಾದಿಸಲು ಹಾಗೂ ಪ್ರಕರಣಗಳನ್ನು ವರ್ಗೀಕರಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ ಮಾಡಬಹುದೇ ಹೊರತು ನ್ಯಾಯದಾನ ಪ್ರಕ್ರಿಯೆಯಲ್ಲಿ ಪರಿಣಾಮಕಾರಿ ಆಗಲಾರದು. ಎಐ ಗೆ ತನ್ನದೇ ಆದ ಮಿತಿಗಳಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net