ಸಾಧು-ಸಂತರು ಒಂದು ವರ್ಗಕ್ಕೆ ಸೀಮಿತರಲ್ಲ:ಜಿಲ್ಲಾಧಿಕಾರಿ ಸಿ.ಸತ್ಯಭಾಮಾ

ಸಾಧು-ಸಂತರು ಒಂದು ವರ್ಗಕ್ಕೆ ಸೀಮಿತರಲ್ಲ:ಜಿಲ್ಲಾಧಿಕಾರಿ ಸಿ.ಸತ್ಯಭಾಮಾ
Published on

ಹಾಸನ: ಕನಕದಾಸರು ಕರ್ನಾಟಕದಲ್ಲಿ 15, 16ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ದಾಸರಲ್ಲಿ ಒಬ್ಬರಾಗಿದ್ದರು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಾಸ ಶ್ರೇಷ್ಠ ಕನಕದಾಸ ಜಯಂತ್ಯೋತ್ಸವ ಸಮಿತಿ ಸಹಯೋಗದಲ್ಲಿ ದಾಸ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕ ದಾಸರ ಭಕ್ತಿ ಎಷ್ಟು ಶ್ರೇಷ್ಠ ಎಂಬುದಕ್ಕೆ ಉಡುಪಿಯ ಶ್ರೀ ಕೃಷ್ಣನ ದೇವಸ್ಥಾನ ಸಾಕ್ಷಿಯಾಗಿದೆ ಎಂದರು.
ಕನಕದಾಸರು ಎಲ್ಲವನ್ನೂ ತೊರೆದು ಶ್ರೀ ಕೃಷ್ಣನ ದಾಸರಾಗಿದ್ದರು. ಕನಕದಾಸರ ಹೆಸರು ಅಜಾರಾಮರವಾಗಿದೆ. ಇಂತಹ ಸಂತರ ಬಗ್ಗೆ ಅರಿಯಬೇಕು. ಸಾಧು-ಸಂತರು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಅವರು ಕೊಡುಗೆ ಅಪಾರವಾದ್ದುದ್ದು ಆದ್ದರಿಂದ ಇಂತಹ ಮಹನ್ನಿಯರ ಬಗ್ಗೆ ಸಮಾಜಕ್ಕೆ ಅರಿಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ ಆರ್. ಓಬಳೇಶಘಟ್ಟಿ ಅವರು ಮಾತನಾಡಿ, ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಯುದ್ದ ಕಲೆ, ಮಲ್ಲ ಯುದ್ದ ಅನೇಕ ವಿಷಯಗಳ ಬಗ್ಗೆ ಅರಿತಿದ್ದರು. 75 ಹಳ್ಳಿಗಳ ದಂಡನಾಯಕನಾಗಿ ಸೇವೆ ಸಲ್ಲಿಸುವ ವೇಳೆಯಲ್ಲಿ ಅಲ್ಲಿಯ ಜನರು ಇವರ ಸೇವೆಗಾಗಿ ಕನಕನಾಯಕ ಎಂಬ ಹೆಸರನ್ನು ನೀಡುತ್ತಾರೆ. ನಂತರ ಕನಕದಾಸರಾಗಿ ಸಮಾಜ ಸುಧಾರಣೆಗೆ ತೊಡಗಿಸಿಕೊಂಡು ಕನಕದಾಸರಾಗುತ್ತಾರೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ಬಲ್ಲಿರಾ ಎಂದು 15ನೇ ಶತಮಾನದಲ್ಲಿ ಹೇಳಿ ಜಾತ್ಯತೀತ ತತ್ವವನ್ನು ಸಾರಿದ್ದರು ಎಂದು ಹೇಳುವ ಮೂಲಕ ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ಹಾಸನ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ ಅವರು ಮಾತನಾಡಿ ಶ್ರೀ ಕೃಷ್ಣನ ದಾಸರಾದ ಕನಕದಾಸರು ಒಂದು ಸಮಾಜಕ್ಕೆ ಸೀಮಿತವಲ್ಲ. ಕನಕದಾಸರು ಸೇರಿದಂತೆ ಅನೇಕ ಮಹನೀಯರು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಡಿಗಿ ಇರಿಸಿದವರು. ಅವರ ತತ್ವ, ಚಿಂತನೆಗಳನ್ನು ನಾವು ಅರಿಯಬೇಕು ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ಸೇರಿ ಹಲವು ಗಣ್ಯರು ಚಾಲನೆ ನೀಡಿದರು. ಸಿಂಗರಿಸಿದ ಬೆಳ್ಳಿ ರಥದಲ್ಲಿ ಕನಕದಾಸರ ಭಾವಚಿತ್ರವನ್ನು ಇರಿಸಿ ಹಲವು ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮರವಣಿಗೆ ನಡೆಸಿ ಹಾಸನ ಕಲಾಕ್ಷೇತ್ರ ತಲುಪಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶ್ ಗೌಡ, ಅಪರ ಜಿಲ್ಲಾಧಿಕಾರಿ ಶಂಕುತಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೆಗೌಡ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಪುಟ್ಟಸ್ವಾಮಿ ಶೆಟ್ಟರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ತಾರಾನಾಥ್ ಹಾಗೂ ಮತಿತ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net