ಸಾಧು ಸಂತರಿಂದಾಗಿ ನಮ್ಮ ಭೂಮಿ ಅತ್ಯಂತ ಪವಿತ್ರ

IMG-20250830-WA0127
Published on

ಸಾಧು ಸಂತರಿಂದಾಗಿ ನಮ್ಮ ಭೂಮಿ ಅತ್ಯಂತ ಪವಿತ್ರ

| ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಗುರುಭಕ್ತಿ, ಧಾರ್ಮಿಕ ಆಚರಣೆ, ಸಂಸ್ಕೃತಿ, ಪರಂಪರೆಗಳಿಂದಾಗಿ, ಸಾಧು ಸಂತರಿಂದಾಗಿ ನಮ್ಮ ಭೂಮಿ ಅತ್ಯಂತ ಪವಿತ್ರವಾಗಿದೆ. ಇಂತಹ ನೆಲದಲ್ಲಿ ಬದುಕಿ, ಬಾಳುವುದೇ ನಮ್ಮ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಪ್ರಾಯ ಪಟ್ಟರು.

ತಾಲೂಕಿನ ತಾರಿಹಾಳ ಗ್ರಾಮದ ಅಡವಿ ಸಿದ್ಧೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾರಿಹಾಳ ಉತ್ಸವ ೨೦೨೫ರ ಮೌನ ಅನುಷ್ಠಾನ ಸಮಾರಂಭದಲ್ಲಿ  ಭಾಗವಹಿಸಿ ಅವರು ಮಾತನಾಡಿದರು.

ಶ್ರಾವಣ ಮಾಸದ ನಿಮಿತ್ಯ ಲೋಕ ಕಲ್ಯಾಣಾರ್ಥ, ಭಕ್ತರ ಹಿತಕ್ಕಾಗಿ ಉತ್ತರಾಖಂಡ ರಾಜ್ಯದ ದೇವಭೂಮಿ ಹಿಮಾಲಯದಲ್ಲಿ  ಪೂಜ್ಯ ಶ್ರೀ ಅಡವೀಶ್ವರ ದೇವರು ಒಂದು ತಿಂಗಳ ಮೌನ ಅನುಷ್ಠಾನ ಕೈಗೊಂಡ ಪ್ರಯುಕ್ತ ಕೆಲವು ದಿನಗಳ ಕಾಲ ಪ್ರವಚನ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಭಾಗ್ಯ ಎಂದರು.

ನಮ್ಮ ಗ್ರಾಮೀಣ ಕ್ಷೇತ್ರ ಸಜ್ಜನರಿಂದಾಗಿ, ಮಠಾಧೀಶರಿಂದಾಗಿ, ನೂರಾರು ಮಂದಿರಗಳಿಂದಾಗಿ ಪುಣ್ಯ ಕ್ಷೇತ್ರವಾಗಿದೆ. ನಿಮ್ಮೆಲ್ಲರ ಸಹಕಾರ, ಆಶಿರ್ವಾದದಿಂದ ನಾನು ರಾಜ್ಯದಲ್ಲಿ ಮಂತ್ರಿಯಾಗಿರುವೆ. ಇಡೀ ರಾಜ್ಯದ ಸೇವೆ ಮಾಡುವ, ರಾಜ್ಯದೆಲ್ಲೆಡೆ ಗ್ರಾಮೀಣ ಕ್ಷೇತ್ರದ ಹೆಸರನ್ನು ಬೆಳಗುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಭಾಗ್ಯ ನನ್ನದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮುರುಘೇಂದ್ರ ಮಹಾಸ್ವಾಮಿಗಳು, ಮುನವಳ್ಳಿ ಸೋಮಶೇಖರ ಮಠದ ಪ್ರಭುನೀಲಕಂಠ ಮಹಾಸ್ವಾಮಿಗಳು, ಮೈಸೂರಿನ ನಿರಂಜನ ದೇವರು, ಕಲಬುರ್ಗಿ ಮೇಳಕುಂದಾದ ಶಶಿಕುಮಾರ ದೇವರು, ನಿರುಪಾದಿ ದೇವರು, ಗುಳೇದಗುಡ್ಡದ ರೇವಣಸಿದ್ಧೇಶ್ವರ ದೇವರು, ಬೈಲವಾಡದ ಶಂಕರಲಿಂಗ ದೇವರು, ಗದಗದ ವೇದಮೂರ್ತಿ ಸದಾನಂದ ಶಾಸ್ತ್ರಿ ಸೋಮನಾಳದ ಶರಣಬಸವ  ಹಿರೇಮಠ, ಪಂಚಾಕ್ಷರಿ ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net