ಸಾಧು, ಸಂತರ ಪ್ರಯತ್ನದಿಂದ ರಾಷ್ಟ್ರ ಸುಭದ್ರ

10 svr 02 b
Published on

ಸವಣೂರ: ಯೋಗದ ತವರೂರಾದ ಭಾರತ ರಾಷ್ಟ್ರದಲ್ಲಿ ಧಾರ್ವಿುಕತೆಗೆ ಗಟ್ಟಿಯಾದ ನೆಲೆ ಹೊಂದಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಹೇಳಿದರು.

ತಾಲೂಕಿನ ಕೃಷ್ಣಾಪುರದ ಬಂಜಾರ ಗುರುಪೀಠದ ಮಠದ ಗುಹೆಯಲ್ಲಿ ಬಂಜಾರ ಗುರು ಪೀಠದ ಕುಮಾರ ಮಹಾರಾಜರು 62 ದಿನ ಕೈಗೊಂಡ ಮೌನ ವ್ರತ ಮುಕ್ತಾಯದ ಸರಳ ಸಮಾರಂಭದಲ್ಲಿ ಗುರುವಾರ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜೀವನದಲ್ಲಿ ಯೋಗ, ಭೋಗ ಹಾಗೂ ರೋಗ ಎಂಬ ಮೂರು ಹಂತಗಳನ್ನು ಕಾಣಬಹುದಾಗಿದೆ. ಭೋಗದ ಜೀವನ ರೋಗವನ್ನು ತಂದುಕೊಡುತ್ತದೆ. ಯೋಗ ಮಾಡಿದವರು ಅಮರರಾಗುತ್ತಾರೆ. ಲೋಕ ಕಲ್ಯಾಣಕ್ಕಾಗಿ ಸಾಧು, ಸಂತರ ನಿರಂತರ ಪ್ರಯತ್ನದಿಂದ ರಾಷ್ಟ್ರ ಸುಭದ್ರವಾಗಿದೆ. ಜನಸಾಮಾನ್ಯರ ಆರೋಗ್ಯ ಹಾಗೂ ಕಲ್ಯಾಣಕ್ಕಾಗಿ ಶರಣರು ಯೋಗ ಅನುಷ್ಠಾನ ಕೈಗೊಳ್ಳುತ್ತ ಬಂದಿದ್ದಾರೆ. ಕಿರಿಯ ವಯಸ್ಸಿನಲ್ಲಿ ಬಂಜಾರ ಪೀಠದ ಗುರುಗಳಾದ ಕುಮಾರ ಮಹಾರಾಜರು ಅನುಷ್ಠಾನ ಕೈಗೊಂಡಿರುವುದು ಸಂತಸದ ಸಂಗತಿ. ಸಂಸಾರಿಗಳು ಸ್ವಾರ್ಥಕ್ಕಾಗಿ ಸಾಧನೆ ಮಾಡಿದರೆ, ಸನ್ಯಾಸಿಗಳು, ಸಾಧು- ಸಂತರು ಜಗತ್ತಿನ ಕಲ್ಯಾಣಕ್ಕಾಗಿ ಸಾಧನೆ ಮಾಡುತ್ತಾರೆ ಎಂದರು.

ಬಂಜಾರ ಗುರುಪೀಠದ ಕುಮಾರ ಮಹಾರಾಜರು ಮಾತನಾಡಿದರು.

ಶಿರಹಟ್ಟಿ ಜಗದ್ಗುರು ಶ್ರೀ ಫಕೀರಸಿದ್ದರಾಮ ಮಹಾಸ್ವಾಮೀಜಿ, ಹತ್ತಿಮತ್ತೂರ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ, ಬಹದ್ದೂರ ಭಂಡ ಕೊಪ್ಪಳ ಶ್ರೀ ಗೋಸಾಯಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಸುಣಗಾರ, ಸೋಮಣ್ಣ ಲಮಾಣಿ, ಮಾರುತಿ ಹಾಲಗಿ, ಸೋಮಣ್ಣ ಅಳಲಗೇರಿ, ಎಚ್.ಆರ್. ಲಮಾಣಿ, ಎಸ್.ಎಚ್. ಕೊರಚರ, ಮಾರುತಿ ಲಮಾಣಿ, ಬಿ.ಜಿ. ಮಲ್ಲಿಕೇರಿಗೌಡ್ರ, ಸುರೇಶ ದಾಳಗುಂದ, ಇತರರು ಪಾಲ್ಗೊಂಡಿದ್ದರು.

ಸರಳ ಸ್ವಾಗತ: ಲೋಕ ಕಲ್ಯಾಣ, ಯೋಧರ ಹಾಗೂ ರೈತರ ಒಳಿತಿಗಾಗಿ ಗಾಳಿ, ಬೆಳಕು ಬಾರದ ಗುಹೆಯಲ್ಲಿ ದೀಪದ ಬೆಳಕಿನಲ್ಲಿ 62 ದಿನಗಳ ಕಾಲ ಮೌನ ವ್ರತ ಕೈಗೊಂಡು ಆರೋಗ್ಯವಾಗಿ ಹೊರಬಂದ ಸವಣೂರ ತಾಲೂಕು ಕೃಷ್ಣಾಪುರದ ಬಂಜಾರ ಗುರುಪೀಠದ ಕುಮಾರ ಮಹಾರಾಜರನ್ನು ಭಕ್ತರು ವಿವಿಧ ಧಾರ್ವಿುಕ ಕೈಂಕರ್ಯಗಳ ಮೂಲಕ ಸ್ವಾಗತಿಸಿದರು. ಲಂಬಾಣಿ ಮಹಿಳಾ ಸಂಘಟನೆ ಸದಸ್ಯರು ಜನಪದ ಗೀತೆಗೆ ಹೆಜ್ಜೆ ಹಾಕಿದರು. ಶ್ರೀಗಳು ವ್ರತ ಅನುಷ್ಠಾನಕ್ಕೆ ಗುಹೆಯೊಳಗೆ ಹೋದ ನಂತರ ಗುಹೆ ಬಾಗಿಲನ್ನು ಇಟ್ಟಿಗೆ, ಸಿಮೆಂಟ್​ನಿಂದ ಬಂದ್ ಮಾಡಲಾಗಿತ್ತು. ಗುರುವಾರ ಶ್ರೀಗಳು ಆರೋಗ್ಯವಾಗಿ ಹೊರ ಬಂದಿದ್ದು ಭಕ್ತರ ಹರ್ಷಕ್ಕೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net