

ಮೈಸೂರು: ವಿದ್ಯಾರ್ಥಿಗಳು ಸಾಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಸ್.ಎ. ರಾಮದಾಸ್ ಕರೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮೀಕರಣಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಮಂಗಳವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿನಿಯ ಕುಟುಂಬಕ್ಕೆ ಸ್ವಂತ ಮನೆ ಇರಲಿಲ್ಲ. ಆಕೆಯ ಸಾಧನೆಯನ್ನು ಗುರುತಿಸಿ ಮನೆ ನೀಡಲಾಯತು. ಫೆಬ್ರವರಿ ಅಂತ್ಯಕ್ಕೆ ಲಲಿತಮಹಲ್ ಹಿಂಭಾಗ ಗುಂಪು ಮನೆ ನಿರ್ಮಾಣ ಕಾರ್ಯ ನಡೆಯಲಿದ್ದು, ಅದರ ಭೂಮಿಪೂಜೆಯನ್ನು ಆಕೆಯೇ ನೆರವೇರಿಸಲಿದ್ದಾಳೆ. ಆಕೆ ಎಲ್ಲರಿಗೂ ಮಾದರಿ ವಿದ್ಯಾರ್ಥಿನಿ ಎಂದರು.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಹೆಚ್ಚಿನ ಕಿಚ್ಚು ಇರುತ್ತದೆ. ಹೆಚ್ಚಿನ ಸಾಧಕರೂ ಅವರೇ ಆಗಿದ್ದಾರೆ. ಹಾಗಾಗಿ ನೀವೆಲ್ಲರೂ ಈ ಸಾಲಿನಲ್ಲಿ ಶೇ.100 ಫಲಿತಾಂಶ ತರಬೇಕು. ಸಾಧಿಸುವ ಮನೋಭಾವ ಇದ್ದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬ ಮಂತ್ರ ನಿಮ್ಮದಾಗಬೇಕು ಎಂದು ಹೇಳಿದರು.
ನಮ್ಮ ಕ್ಷೇತ್ರದ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಈವರೆಗೆ ಶೇ.93 ಫಲಿತಾಂಶ ಬಂದಿದೆ. ಅದು ಶೇ.100 ಆಗಬೇಕು. ಅದನ್ನು ಸಾಧಿಸಬೇಕಾದ ಹೊಣೆ ನಿಮ್ಮಗಳ ಮೇಲಿದೆ. ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಅರಮನೆಯಲ್ಲಿ ಅಭಿನಂದಿಸಲಾಗುವುದು. ಮಾತ್ರವಲ್ಲ, ಬಾಡಿಗೆ ಮನೆಯಲ್ಲಿರುವ ಮಕ್ಕಳಿಗೆ ಮನೆ ನೀಡಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ .ರಾಮಾರಾಧ್ಯ, ಪಾಲಿಕೆ ಸದಸ್ಯೆ ಛಾಯಾದೇವಿ, ಬಿಆರ್‌ಸಿ ಶ್ರೀಕಂಠ ಸ್ವಾಮಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಕಂಠ ಶಾಸ್ತ್ರಿ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ ಹಾಗೂ ಇತರರು ಇದ್ದರು.