

ಕುಶಾಲನಗರ: ಜೀವನದಲ್ಲಿ ಏನನ್ನಾದರೂ ಸಾಧಿಸುತ್ತೇನೆಂಬ ಛಲ ಹೊಂದಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಪರ್ವತಾರೋಹಿ ಭವಾನಿ ತೆಕ್ಕಡ ನಂಜುಂಡ ಹೇಳಿದರು.
ಚಿಕ್ಕ ಆಳುವಾರ ಗ್ರಾಮದಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಸ್ನಾತಕೋತ್ತರದ ಮಾನವಿಕ ಸಂಕೀರ್ಣದಲ್ಲಿ ವಿವಿಯ ಮಹಿಳಾ ಕೋಶದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹಲವಾರು ಶತಮಾನಗಳಿಂದ ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯ, ಶೋಷಣೆ, ಪಕ್ಷಪಾತದಿಂದ ಮುಕ್ತವಾಗಿರುವ ಲಿಂಗ ಸಮಾನತೆ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಕಠಿಣ ಪರಿಶ್ರಮದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ ಎಂದರು.
ಮಹಿಳಾ ಕೋಶದ ಸಂಚಾಲಕಿ ಡಾ.ಬಿ.ಎಸ್.ಗುಣಶ್ರೀ, ಸಂಸ್ಥೆಯ ಪ್ರಭಾರ ನಿರ್ದೇಶಕ ಪ್ರೊ.ಕೆ.ಕೆ.ಧರ್ಮಪ್ಪ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರಾಜಕುಮಾರ.ಎಸ್.ಮೇಟಿ, ಉಪನ್ಯಾಸಕಿ ಎಂ.ಅರ್ಪಿತಾ ಇತರರು ಇದ್ದರು.