

ಚಿತ್ರದುರ್ಗ: ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದು, ಸಾಧನೆ ಶಿಖರ ಏರುವುದರ ಕಡೆ ಗಮನಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ‘ಫಾರ್ಮ ನೊವಟೊ-25’ ಉದ್ಘಾಟಿಸಿ ಮಾತನಾಡಿದರು.
ಔಷಧೀಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಬೋಧಕ ವರ್ಗದವರ ಮಾರ್ಗದರ್ಶನದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಬಿ. ಮುರಳೀಧರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ ಮತ್ತು ತುಡಿತ ಇರಬೇಕು. ಸತತ ಪರಿಶ್ರಮದಿಂದ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಟಿ.ಎಸ್. ನಾಗರಾಜ್ ಮಾತನಾಡಿದರು. ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಫಾರ್ಮಸಿ ವಿಭಾಗದ ಬಿಒಎಸ್ ಸದಸ್ಯ ಡಾ. ಎಂ.ಎಂ.ಜೆ. ವಿಜಯಕುಮಾರ್, ಡಾ.ಆರ್. ಯೋಗಾನಂದ, ಡಾ. ಸ್ನೇಹಲತಾ ಅವರನ್ನು ಸನ್ಮಾನಿಸಲಾಯಿತು. ಡಾ. ಮಾರುತಿ ಎಕ್ಬೋಟೆ, ಡಾ. ಬಸವರಾಜ್‌ಹರ್ತಿ, ಡಾ. ನಟರಾಜ್ ಹಾಜರಿದ್ದರು.