ಸಾಧನೆಗೆ ಹಣವಲ್ಲ, ಛಲ ಮುಖ್ಯ

4 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವನದಲ್ಲಿ ಸಾಧನೆ ಮಾಡಲು ಹಣ ಬೇಕಿಲ್ಲ. ಸಾಧನೆ ಮಾಡಬೇಕು ಎಂಬ ಛಲ, ಮನಸ್ಸು ಮುಖ್ಯವಾಗಿದೆ ಎಂದು ಅಡವಿಸಿದ್ದೇಶ್ವರ ಮಠದ ಶ್ರೀ ಅಡಿವೇಶ ದೇವರು ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯ ಬಳಿಯ ಸಾಧುನವರ ಎಸ್ಟೇಟ್‌ನ ಶ್ರೀ ಸಾಯಿ ಗಾರ್ಡನ್‌ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸುಬ್ರಮಣ್ಣೇಶ್ವರ ಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಸೋಮವಾರ ಪ್ರವಚನ ನೀಡಿದರು.
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಲ್ಲದೆ, ನಮ್ಮಿಂದಾದ ಸಹಾಯ ಮಾಡಬೇಕು ಎಂಬ ಮನಸ್ಸಿದ್ದರೆ ಏನೆಲ್ಲ ಮಾಡಬಹುದು. ಇದಕ್ಕೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರೇ ಸಾಕ್ಷಿ. ಇವರು ಕಿತ್ತಳೆ ಮಾರಿ ಬಂದ ಹಣದಲ್ಲಿ ಶಾಲೆ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ಹೀಗಾಗಿ ಸಾಧನೆಗೆ ಛಲ ಮುಖ್ಯ ಎಂದರು.
ಯುವ ಜನತೆ ದುರಾಭ್ಯಾಸಗಳಿಂದ ದೂರವಿದ್ದು, ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಪಾಲಕರು ಸಹ ತಮ್ಮ ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀಡುವುದರ ಜತೆಗೆ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಹ ಪಾಲ್ಗೊಳ್ಳುವಂತೆ ಆಸಕ್ತಿ ವಹಿಸಬೇಕು ಎಂದರು.
ಇದಕ್ಕೂ ಪೂರ್ವದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ, ಶಿವಕುಮಾರ ಮಠದ, ಅನ್ನದಾನಿ ಚೌಕಿಮಠ, ಗುರುನಾಥ ಮುತ್ತಗಿ, ಗುರುರಾಜ ತುರಮರಿ, ರಾಣಿ ಚೆನ್ನಮ್ಮ ಮಹಿಳಾ ಸಂಘದ ಸಂಗಮೇಶ್ವರಿ ಮಠದ, ಪಾರ್ವತಿ ಚೌಕಿಮಠ, ಸಾಧನಾ ತುರಮರಿ, ಸುಮನಾ ಮಲ್ಲನಗೌಡರ, ವೀಣಾ ಹೊಸಮಠ, ಜಯಲಕ್ಷ್ಮಿ ಧೋತ್ರದ, ನಿಜನಗೌಡ ಪಾಟೀಲ, ಮಹಾದೇವಿ ಮುತ್ತಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net