

ಧಾರವಾಡ: ಗುರು ಬಸವಣ್ಣನವರು ಮಹಿಳಾ ಕುಲದ ಉದ್ಧಾರಕ್ಕೆ ಶ್ರಮಿಸಿದ ವಿಶ್ವದ ಮೊದಲ ದಾರ್ಶನಿಕರು. ಅನುಭವ ಮಂಟಪದಲ್ಲಿ ವೀರವೈರಾಗ್ಯ ನಿಧಿ ಅಕ್ಕಮಹಾದೇವಿ, ವೀರ ಮಾತೆ ಅಕ್ಕನಾಗಮ್ಮ, ಗುಡ್ಡಾಪುರದ ದಾನಮ್ಮದೇವಿ, ಸತ್ಯಕ್ಕ, ಕಲ್ಯಾಣಮ್ಮ ಹೀಗೆ ಮಹಿಳೆಯರು ಧಾರ್ವಿುಕ, ಆಧ್ಯಾತ್ಮಿಕ ಲೋಕದಲ್ಲಿ ಸಾಧನೆಗೈಯಲು ಬಸವಣ್ಣನವರು ಕಾರಣ. ಅವರ ಹಾದಿಯಲ್ಲಿ ಸಾಗಿ ಮಹಿಳಾ ಗುರು ಪೀಠ ಸ್ಥಾಪಿಸಿದ ಕೀರ್ತಿ ಲಿಂ. ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ ಎಂದು ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ರಾಷ್ಟ್ರೀಯ ಬಸವದಳದಿಂದ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಿಂ. ಮಾತೆ ಮಹಾದೇವಿ ಅವರ ದ್ವಿತೀಯ ಸಂಸ್ಮರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರೇಷ್ಮೆ ಬೆಳೆ ಬೆಳೆದು ಆರ್ಥಿಕ ಸ್ವಾವಲಂಬನೆ ಹೊಂದಲು ಯುವಕರು, ವಿಶೇಷವಾಗಿ ಮಹಿಳೆಯರು ಮುಂದಾಗಬೇಕು. ರೇಷ್ಮೆ ಕೃಷಿ ಉತ್ತೇಜನಕ್ಕೆ ಸರ್ಕಾರದಿಂದ ಹಲವು ಯೋಜನೆಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಡಾ. ಮಾತೆ ಗಂಗಾದೇವಿ ಆಶೀರ್ವಚನ ನೀಡಿ, ಸಂವಿಧಾನದ ಆಶಯದಂತೆ ಮಹಿಳೆಯರು ಆಡಳಿತ ರಂಗದಲ್ಲಿ ಸಾಧನೆ ಮಾಡಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಮಹಿಳೆ ಧಾರ್ವಿುಕವಾಗಿ ಗುರುವಾಗುವುದು ಸಾಧ್ಯವಾಗದಿದ್ದಾಗ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸಂಪ್ರದಾಯವಾದಿಗಳ ವಿರೋಧದ ನಡುವೆಯೂ ಮಹಿಳಾ ಧಾರ್ವಿುಕ ಸ್ವಾತಂತ್ರ್ಯ ಎತ್ತಿ ಹಿಡಿದ ಕೀರ್ತಿ ಮಾತಾಜಿಗೆ ಸಲ್ಲುತ್ತದೆ ಎಂದರು.
ಹಿರಿಯ ಸಂಶೋಧಕ ಡಾ. ಎಸ್.ಆರ್. ಗುಂಜಾಳ ಅಧ್ಯಕ್ಷತೆ ವಹಿಸಿದ್ದರು. ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಜಗದ್ಗುರು ಮಾತೆ ಜ್ಞಾನೇಶ್ವರಿ, ಪ್ರಭುಲಿಂಗ ಸ್ವಾಮೀಜಿ, ಮಾತೆ ವಿಜಯಾಂಬಿಕೆ, ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಶಿವಾನಂದ ಅಬಲೂರ, ನಿವೃತ್ತ ಕೆಎಎಸ್ ಅಧಿಕಾರಿ ಎಂ.ವಿ. ಗೊಂಗಡಶೆಟ್ಟಿ, ಗೋಪಾಲ ಭಟ್, ಪ್ರೊ. ಶಂಭು ಹೆಗಡಾಳ, ಇತರರಿದ್ದರು.ನೂತನವಾಗಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಹುಬ್ಬಳ್ಳಿಯ ರೂಪಾ ಚಿನಿವಾರ ಅವರನ್ನು ಸನ್ಮಾನಿಸಲಾಯಿತು. ವಕೀಲ ಕೆ.ಎಸ್. ಕೋರಿಶೆಟ್ಟರ ಸ್ವಾಗತಿಸಿದರು. ಸವಿತಾ ಕುಸುಗಲ್ ನಿರ್ವಹಿಸಿದರು.