ಸಾಧನೆಗೆ ಬೇಕು ನಿರಂತರ ಪ್ರಯತ್ನ

10BK10
ಬಸವಕಲ್ಯಾಣದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ ವಿದ್ಯಾರ್ಥಿಗಳ ಸ್ವಾಗತ, ಪರಿಚಯ ಸಮಾರಂಭವನ್ನು ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಉದ್ಘಾಟಿಸಿದರು. ಮಲ್ಲಮ್ಮ ಎಂ. ತಾಳಂಪಳ್ಳಿ, ಡಾ.ಅಶೋಕಕುಮಾರ ವಣಗೇರಿ, ಡಾ.ಅರುಣಕುಮಾರ ಯಲಾಲ್, ಪ್ರೇಮಸಾಗರ ಪಾಟೀಲ್ ಇದ್ದರು.
Published on

ಬಸವಕಲ್ಯಾಣ: ಸಾಧಿಸುವ ಛಲ, ನಿರಂತರ ಪ್ರಯತ್ನ, ಮನೋಬಲ ಹಾಗೂ ಆತ್ಮಬಲ ಇದ್ದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದು ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಹೇಳಿದರು.

ನಗರದ ಹೊರವಲಯದಲ್ಲಿನ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಆಯೋಜಿಲಾಗಿದ್ದ ೨೦೨೫-೨೬ನೇ ಸಾಲಿಗೆ ೧ನೇ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ, ಪರಿಚಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ಕಲ್ಪಿಸುವುದು ಸಂಸ್ಥೆಯ ಮೂಲ ಆಶಯವಾಗಿದೆ ಎಂದರು.

ಸಮಯ ಹಾಗೂ ಇಲ್ಲಿಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡುವ ಜತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಫಲಿತಾಂಶ ತಮ್ಮದಾಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು. ಕಷ್ಟಪಟ್ಟು ಕಲಿಸಿದ ಮನೆಯವರ ವಿಶ್ವಾಸ ಉಳಿಸಿಕೊಳ್ಳಬೇಕು. ಕಲಿತ ಸಂಸ್ಥೆಗೆ ಹೆಸರು ತರುವ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಮಲ್ಲಮ್ಮ ಎಂ. ತಾಳಂಪಳ್ಳಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳನ್ನು ಪಡೆಯಬೇಕಾದರೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳಬೇಕು. ಶ್ರಮವಹಿಸಿ ಅಭ್ಯಾಸ ಮಾಡಬೇಕು. ಉತ್ತಮ ಫಲಿತಾಂಶ ಪಡೆಯುವ ಜತೆಗೆ ಸ್ಪರ್ಧಾತ್ಮಕ ಪರಿಸ್ಥಿತಿ ಎದುರಿಸಲು ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಜೀವನದಲ್ಲಿ ಮುನ್ನುಗ್ಗಬೇಕಾಗಿದ್ದು, ಉಜ್ವಲ ಭವಿಷ್ಯಕ್ಕಾಗಿ ಕಠಿಣ ಶ್ರಮ ಪಡಬೇಕು. ಸಾಧಿಸುವ ಹಂಬಲ, ಸಾಧನೆಗೆ ಪೂರಕವಾದ ಕಠಿಣ ಪರಿಶ್ರಮ ಅವಶ್ಯಕ ಎಂದರು.

ಪ್ರೇಮಸಾಗರ ಪಾಟೀಲ್ ಇತರರಿದ್ದರು. ಉಪ ಪ್ರಾಚಾರ್ಯ ಡಾ.ಅರಣಕುಮಾರ ಯಲಾಲ್ ಸ್ವಾಗತಿಸಿದರು. ವಿದ್ಯಾಸಾಗರ ನಿರೂಪಣೆ ಮಾಡಿದರು. ಆರ್.ಬಿ. ಡಿಗ್ಗಿಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net