ಸಾಧನೆಗೆ ಬೇಕು ನಿರಂತರ ಪ್ರಯತ್ನ

28BK2
Published on

ಬಸವಕಲ್ಯಾಣ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕದೊಂದಿಗೆ ಅಪ್ರತಿಮ ಸಾಧನೆ ಮಾಡಿ ತಂದೆ-ತಾಯಿ, ಕಲಿತ ಶಾಲೆ ಹಾಗೂ ಈ ನೆಲಕ್ಕೆ ಕೀರ್ತಿ ತಂದಿರುವುದು ಸಂಸತ ತಂದಿದೆ. ಈ ಫಲಿತಾಂಶ ಮುಂದಿನ ಜೀವನದ ಉತ್ತಮ ಆರಂಭ. ಇಂಥ ಪ್ರಯತ್ನ ನಿತ್ಯ ನಿರಂತರವಾಗಿರಲಿ ಎಂದು ಶಾಸಕ ಶರಣು ಸಲಗರ ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿದ ಅವರು, ಪರೀಕ್ಷೆಯಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿರುವ ನೌಕರರ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ ಡಾ.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಾಜಿ ಎಂಎಲ್ಸಿ ಕೆ.ಪುಂಡಲೀಕರಾವ ಮಾತನಾಡಿ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಪ್ರಾಮಾಣಿಕ ಕಾರ್ಯ ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿದ್ದು ಜವಾವ್ದಾರಿ ಹೆಚ್ಚಿಸಿದೆ. ಸಾಧನೆ ಮಾಡಿದ ವಿದ್ಯಾಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯ ಬೇರೆಯವರಿಗೆ ಪ್ರೇರಣೆ ಜತೆಗೆ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದರು.

ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಭಾಷಾಂತರ ನಿರ್ದೇಶನಾಲಯ ಉಪ ನಿರ್ದೇಶಕ ಭಕ್ತರಾಜ ಪಾಟೀಲ್ ಮಾತನಾಡಿ, ಕಲ್ಯಾಣದಲ್ಲಿ ನನ್ನನ್ನು ಸನ್ಮಾನ ಮಾಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಸಿಸಿ ಶ್ರೇಷ್ಠ ಸಾಧಕರಾಗಿ ತಾಲೂಕಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ ಪಾಟೀಲ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪಕುಮಾರ ಉತ್ತಮ ಪ್ರಾಸ್ತಾವಿಕ ಮಾತನಾಡಿದರು.

ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಂತೋಷ ಕೋರಾಳೆ, ಸಂಘದ ಉಪಾಧ್ಯಕ್ಷ ಡಾ.ಬಾಲಕೃಷ್ಣ ರಾಠೋಡ್, ಡಾ.ಮಹಾಲೇಶ, ಶಕೀಲ್ ಪಟೇಲ್, ರಮೇಶ ಹಾದಿಮನಿ, ಪ್ರಕಾಶ ವಾಡೇಕರ್, ಸತೀಶ ಹಾದಿಮನಿ, ಸತೀಶ ಜಾಧವ್ ಇತರರಿದ್ದರು. ಉಜ್ವಲಾ ಪಾಟೀಲ್ ಸ್ವಾಗತಿಸಿದರು. ರಮೇಶ ಉಮ್ಮಾಪುಸರೆ ನಿರೂಪಣೆ ಮಾಡಿದರು.

ಪರೀಕ್ಷೆಯಲ್ಲಿ ಪಡೆದ ಉತ್ತಮ ಫಲಿತಾಂಶ, ಬುದ್ಧಿ ಭವಿಷ್ಯದ ಜೀವನಕ್ಕೆ ವರದಾನವಾಗಲಿ. ಜೀವನದಲ್ಲಿ ಸ್ಪಷ್ಟ ಗುರಿಯೊಂದಿಗೆ ನಿರಂತರ ಪ್ರಯತ್ನ ಮುಂದುವರಿಸಿ ಐಎಎಸ್, ಐಪಿಎಸ್‌ನಂತಹ ಪರೀಕ್ಷೆ ಪಾಸಾಗಿ ಉನ್ನತ ಹುದ್ದೆ ತಮ್ಮದಾಗಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಡಿ ಇಡಬೇಕು.

| ಶರಣು ಸಲಗರ ಶಾಸಕ

ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಪ್ರೋತ್ಸಾಹಿಸುವುದು ಜತೆಗೆ ಇತರರಿಗೆ ಪ್ರೇರಣೆಯಾಗಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿ ಸಮಯದ ಸದ್ಬಳಕೆ ಮಾಡಿಕೊಂಡು ಶ್ರಮವಹಿಸಿ ಅಭ್ಯಸಿಸಿ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮೆರೆಯಬೇಕು.

| ಬಲವಂತರಾವ ಪಾಟೀಲ್

ಜಂಟಿ ನಿರ್ದೇಶಕ, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net