

ಇಂಡಿ: ಸಾಧಿಸುವ ಛಲವಿದ್ದರೆ ಬಡತನ ಅಡ್ಡಿ ಬರಲ್ಲ. ಸಾಧಿಸಲು ನಿರಂತರ ಪ್ರಯತ್ನ ಸಾಧಿಸುವ ಗುರಿ ನಿರಂತರವಾಗಿರಬೇಕು ಎಂದು ಬೆಂಗಳೂರಿನ ಇಸ್ರೋ ವಿಜ್ಞಾನಿ ವಿಲಾಸ್ ರಾಥೋಡ್ ಹೇಳಿದರು.
ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಂತೇಶ್ವರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಚಂದ್ರಯಾನ-3 ಉಡಾವಣೆಯ ಇಸ್ರೋ ವಿಜ್ಞಾನಿ ವಿಲಾಸ ತಾರು ರಾಠೋಡ ಅವರಿಗೆ ಸನ್ಮಾನ ಹಾಗೂ ಸ್ಪೇಸ್ ಆನ್ ವ್ಹೀಲ್ ವಿಜ್ಞಾನ ಪ್ರದರ್ಶನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನೇನು ದೊಡ್ಡ ಶ್ರೀಮಂತರ ಮನೆಯಲ್ಲಿ ಹುಟ್ಟಿದವನಲ್ಲ, ಕಡು ಬಡತನದಲ್ಲಿ ಹುಟ್ಟಿದವನು. ನನ್ನ ತಾಯಿ ತಂದೆ ನಮ್ಮೆಲ್ಲ ಸಹೋದರರನ್ನು ಓದಿಸಲು ನಿರಂತರ ಕೂಲಿ ಮಾಡುತ್ತಿದ್ದರು. ಬಡತನದಲ್ಲಿ ಬೆಳೆದ ನಾನು ಒಂದರಿಂದ ಐದನೆಯ ತರಗತಿಯವರೆಗೆ ಆಶ್ರಮ ಶಾಲೆಯಲ್ಲಿ ಕಲಿತು ಮುಂದೆ ಆರು ಮತ್ತು ಏಳನೇ ತರಗತಿಯನ್ನು ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ, ಎಂಟರಿಂದ ಹತ್ತನೇ ತರಗತಿಯವರೆಗೆ ಶಾಂತೇಶ್ವರ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ್ದೇನೆ ಎಂದರು.
ಸಾಧಿಸಬೇಕೆಂಬ ನನ್ನ ಹಂಬಲ ಗುರಿ ಮುಟ್ಟಲೇಬೇಕೆಂಬ ಛಲ ನನ್ನನ್ನು ನಿರಂತರವಾಗಿ ಓದಲು ಪ್ರೇರೇಪಿಸಿತು. ನನ್ನ ತಾಯಿ ನನ್ನನ್ನು ಶಾಲೆಗೆ ಕಳುಹಿಸಲು ಬೇರೆಯವರ ಜಮೀನಿನಲ್ಲಿ ಹುಲ್ಲು ಕೊಯ್ದು ಅದನ್ನು ಟಾಂಗಾ ಗಾಡಿಯವರಿಗೆ ಮಾರಿ ನನ್ನನ್ನು ಶಾಲೆಗೆ ಕಳುಹಿಸಿದ್ದಾರೆ ಎಂದು ಬಾವುಕರಾದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ ಮಾತನಾಡಿ, ನಮ್ಮ ಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ವಿಲಾಸ್ ರಾಥೋಡ್ ಅವರು ಉತ್ತಮವಾಗಿ ಓದಿ ಇಸ್ರೋ ಚಂದ್ರಯಾನ ಉಪಗ್ರಹ ಉಡಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದು, ನಮ್ಮ ಸಂಸ್ಥೆ ಹಾಗೂ ತಾಲೂಕು, ಜಿಲ್ಲೆಯ ಹೆಸರು ತಂದಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯೆ ಶಿವಕಾಂತಮ್ಮ ರಾಠೋಡ (ನಾಯಕ್) ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಕ್ಕ ಸಮಯದಲ್ಲಿ ಸರಿಯಾಗಿ ಓದುವ ಹವ್ಯಾಸ ಬೆಳೆಸಿಕೊಂಡರೆ ಉತ್ತಮ. ದೊಡ್ಡಮಟ್ಟದ ಗುರಿ ಇಟ್ಟುಕೊಂಡರೆ ಸಾಧಿಸಲು ಸಾಧ್ಯವಾಗುತ್ತದೆ. ಹೆಣ್ಣು ಮಕ್ಕಳಿಗೆ ಪಿಯುಸಿ ಅಥವಾ ಪದವಿ ಮುಗಿಯುವಷ್ಟರಲ್ಲಿ ಮದುವೆ ಮಾಡಿಕೊಡಲಾಗುತ್ತಿದೆ. ಆ ರೂಢಿಯನ್ನು ತಪ್ಪಿಸಬೇಕು. ಹೆಣ್ಣು ಮಕ್ಕಳಿಗೂ ಓದಿ ನೌಕರಿ ಮಾಡಲು ತಂದೆ-ತಾಯಿ ಸಹೋದರರು, ಪತಿ ಬೆಂಬಲಿಸಬೇಕು. ಅಂದಾಗ ಮಾತ್ರ ಹೆಣ್ಣು ಮಕ್ಕಳು ಸಹ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ನನ್ನ ತಂದೆ ತಾಯಿ ಸಹೋದರರು ಮತ್ತು ನನ್ನ ಗಂಡ ನನ್ನನ್ನು ಬೆಂಬಲಿಸಿದ್ದಕ್ಕಾಗಿಯೇ ನಾನು ಸಾಪ್ಟವೇರ್ ಇಂಜಿನಿಯರ್ ಆಗಿ ನಾಲ್ಕಾರು ದೇಶಗಳಲ್ಲಿ ಕೆಲಸ ಮಾಡಿ ಬಂದಿದ್ದೇನೆ. ನನ್ನ ಪತಿ ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸಾಕಷ್ಟು ಒತ್ತಡಗಳಿರುತ್ತವೆ. ಅವರು ಯಾವಾಗ ಮನೆಗೆ ಬರುತ್ತಾರೋ ಯಾವಾಗ ಹೋಗುತ್ತಾರೋ ನಮಗೆ ತಿಳಿಯುವುದಿಲ್ಲ. ದೇಶಕ್ಕೆ ಏನನ್ನಾದರೂ ಕೊಡುಗೆ ಕೊಡಬೇಕೆಂದು ಕೆಲಸ ಮಾಡುತ್ತಿರುವ ನನ್ನ ಪತಿಗೆ ನಾನು ಸದಾ ಬೆಂಬಲವಾಗಿರುತ್ತೇನೆ ಎಂದರು.
ಬಿಇಒ ಟಿ.ಎಸ್. ಆಲಗೂರ, ಮುಖ್ಯಶಿಕ್ಷಕ ರಾಘವೇಂದ್ರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ದೀಪಕ ದೋಶಿ, ಇಸ್ರೋ ವಿಜ್ಞಾನ ಕೇಂದ್ರದ ವಿಜ್ಞಾನಿ ಎಚ್.ಎಲ್. ಶ್ರೀನಿವಾಸ, ಬಿಆರ್‌ಸಿ ಎಸ್.ಆರ್. ನಡಗಡ್ಡಿ, ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಸಿದ್ದಣ್ಣ ತಾಂಬೆ, ಚಂದ್ರಶೇಖರ ದೇವರ, ಮಲ್ಲಿಕಾರ್ಜುನ ದೇವರ, ವರ್ಧಮಾನ ದೋಶಿ, ಸಚಿನ ಗಾಂಧಿ, ಅಜೀತ ಧನಶೆಟ್ಟಿ ಇತರರಿದ್ದರು.
ಪುರಸಭೆ ಆಡಳಿತ ಮಂಡಳಿ ಸೇರಿದಂತೆ ವಿಲಾಸ್ ರಾಥೋಡ್ ಅವರ ಗೆಳೆಯರ ಬಳಗದವರು ವಿಲಾಸ್ ರಾಥೋಡ್ ದಂಪತಿಗಳನ್ನು ಸತ್ಕರಿಸಿದರು.