

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಸಾಧನೆ ಮಾಡಲು ಅರ್ಹರು. ಸಾಧನೆ ಮಾಡಲು ಸತತ ಪ್ರಯತ್ನ ಮತ್ತು ಅಧ್ಯಯನ ಇರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಹೇಳಿದರು.
ನಗರದ ವೈ.ಬಿ. ಅಣ್ಣಿಗೇರಿ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ 2023-24ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನಸಿಕ ಬೆಳವಣಿಗೆ ಜತೆಗೆ ದೈಹಿಕ, ಭಾವನಾತ್ಮಕ ಬೆಳವಣಿಗೆಯಾದಾಗಲೇ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿಗೆ ಪಠ್ಯದಿಂದ ಶೇ. 50ರಷ್ಟು ಜ್ಞಾನ ಲಭಿಸಿದರೆ, ಉಳಿದ ಜ್ಞಾನವು ಪಠ್ಯೇತರ ಚಟುವಟಿಕೆಯಿಂದ ಸಿಗಲಿದೆ. ಹೀಗಾಗಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಸಹ ಮುಖ್ಯವಾಗಿದೆ ಎಂದರು.
ಪ್ರೊ. ಶೌಕತ್ ಅಜೀಮ್ ಮಾತನಾಡಿ, ಮಕ್ಕಳು ದಾರಿ ತಪ್ಪುವುದು ಸಹಜ. ಆದರೆ ದಿಕ್ಕು ತಪ್ಪಬಾರದು. ಸ್ಪಷ್ಟ ಗುರಿಯೊಂದಿಗೆ ಸಾಧನೆ ಮಾಡಬೇಕು. ಹಳ್ಳಿಗಳಿಂದ ಬಂದ ವಿದ್ಯಾರ್ಥಿಗಳು ತಂದೆ-ತಾಯಿಯರ ಆಸೆ ಈಡೇಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಣ್ಣಿಗೇರಿ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೊ. ನಾಗೇಶ ಅಣ್ಣಿಗೇರಿ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಬದುಕು ಇದ್ದಂತೆ. ಅದನ್ನು ಅನುಭವಿಸಿ ಕಾಲೇಜಿಗೆ, ಮನೆಗೆ ಕೀರ್ತಿ ತರಬೇಕು ಎಂದರು.
ಸಂಸ್ಥೆ ಉಪಾಧ್ಯಕ್ಷ ಪ್ರಕಾಶ ಜವಳಿ, ಕಾರ್ಯದರ್ಶಿ ರೇಖಾ ಅಣ್ಣಿಗೇರಿ, ಉಪಪ್ರಾಚಾರ್ಯ ಪ್ರೊ. ಸಚಿನ ಕೆ., ಪ್ರೊ. ಬಸವರಾಜ ಉಡಕೇರಿ, ವಿದ್ಯಾರ್ಥಿ ಪ್ರತಿನಿಧಿ ಶಶಾಂಕ ಯಲಿಗಾರ, ಅಶ್ವಿನಿ ವಿಭೂತಿಮಠ, ಇಇತರರು ಇದ್ದರು.
ಪ್ರೊ. ಮಹಾಬಳೇಶ್ವರಯ್ಯ ಕೆಂಬಾವಿಮಠ ಸ್ವಾಗತಿಸಿದರು. ಪ್ರೊ. ಪ್ರಕಾಶ ತಾಳಿಕೋಟಿ ನಿರೂಪಿಸಿದರು. ಪ್ರೊ. ರೂಪಾ ವಂದಿಸಿದರು.