ಸಾಧನೆಗೆ ಕೆಎಲ್‌ಇ ಸಂಸ್ಥೆ ಪ್ರೇರಣೆ

06
Published on

ಚಿಕ್ಕೋಡಿ: ಶಿಕ್ಷಣ ಸಂಸ್ಥೆಗಳ ಬೆಳವಣೆಗೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಪಾತ್ರ ಮಹತ್ವದ್ದಾಗಿದೆ ಎಂದು ಸಿ.ಬಿ.ಕೋರೆ ಸಕ್ಕರೆ ಕಾರ್ಖಾನೆ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ ಉಮರಾಣಿ ಅಭಿಪ್ರಾಯಪಟ್ಟರು.

ನಗರದ ಕೆಎಲ್‌ಇ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಗುಣಮಟ್ಟದ ಶಿಕ್ಷಣದಿಂದ ಕೆಎಲ್‌ಇ ಸಂಸ್ಥೆ ಗುರ್ತಿಸಿಕೊಂಡಿದೆ ಎಂದು ಹೇಳಿದರು.

ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಎಂ.ಟಿ.ಕುರಣಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕೆಎಲ್‌ಇ ಸಂಸ್ಥೆ ಗಮರ್ನಾಹ ಸಾಧನೆ ಮಾಡಿದೆ. ಲಕ್ಷಾಂತರ ಮಕ್ಕಳ ಬದುಕಿಗೆ ಕೆಎಲ್‌ಇ ಸಂಸ್ಥೆ ಸಂಜೀವಿನಿಯಾಗಿದೆ. ಪಾಲಕರು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದರ ಜತೆಗೆ ಆತ್ಮಸ್ಥೈರ್ಯ ಬೆಳೆಸಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯೋಜಿತ ತಯಾರಿ ರೂಪಿಸಿಕೊಂಡು ಅಧ್ಯಯನ ಮಾಡಬೇಕು. ಅಂದಾಗ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.

ಪ್ರಾಚಾರ್ಯ ಡಾ. ಬಿ.ಜಿ.ಕುಲಕರ್ಣಿ ಮಾತನಾಡಿ, ಕೆಎಲ್‌ಇ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ ಎಂದರು. ಹಳೆಯ ವಿದ್ಯಾರ್ಥಿಗಳ ಸಂಘದಿಂದ ಬಿಎ, ಬಿಕಾಂ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ 50,000 ರೂ. ಬಹುಮಾನ ನೀಡಿ ಸನ್ಮಾನಿಸಲಾಯಿತು.

ಹಳೇ ವಿದ್ಯಾರ್ಥಿಗಳಾದ ಚಂದ್ರಶೇಖರ ಅರಭಾವಿ, ಸಯ್ಯದ ಎಂ.ಎಸ್., ದೇವೆಂದ್ರ ಕರೋಶಿ, ಎಸ್.ಎಸ್. ಕುಂಬಾರ ಅನಿಸಿಕೆ ವ್ಯಕ್ತಪಡಿಸಿದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಎಸ್.ಎಸ್.ಕವಲಾಪೂರೆ, ಎನ್.ಎಸ್. ವಂಟಮುತ್ತೆ, ಬಿ.ಎಸ್.ಹಂಚಿನಾಳ, ಎಸ್.ಎಸ್. ಮಠದ, ಡಾ. ಎಸ್.ಎಂ.ಪಾನಬುಡೆ, ಬಿ.ಎ.ಪಾಟೀಲ, ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಮಹೇಶ ಮದಭಾವಿ, ಡಾ.ಸಿದ್ದು ಮಟ್ಟೆಪ್ಪನ್ನವರ, ಆರ್.ಆರ್.ನಾಯ್ಕ, ಎಸ್.ಕೆ.ನಾಯ್ಕ ಇತರರಿದ್ದರು. ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ. ಎಸ್.ಎಂ. ಪಾಟೀಲ ವಾರ್ಷಿಕ ವರದಿ ಓದಿದರು. ಅಂಕಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾ ಉಗ್ರಾಣಿ ಮತ್ತು ಪ್ರಿಯಾ ಕೊಂಬಾರೆ ನಿರೂಪಿಸಿದರು. ಎನ್.ಬಿ. ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net