

ಚಿತ್ರದುರ್ಗ: ಅತ್ಯಂತ ಅಮೂಲ್ಯವಾಗಿರುವ ವಿದ್ಯಾರ್ಥಿ ಜೀವನ, ಉತ್ತಮ ಭವಿಷ್ಯಕ್ಕೆ ಒಳ್ಳೆಯ ಅಡಿಪಾಯವಾಗಬೇಕು ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಎಸ್‌ಆರ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ, ಸಾಧಕರೊಂದಿಗೆ ಸಂವಾದ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹದಿಹರೆಯದ ಈ ವಯಸ್ಸು, ಮನಸ್ಸು ಹಾಗೂ ಹುಮ್ಮಸ್ಸು ಬಂಗಾರವಾಗಿದೆ. ನಿಮ್ಮ ಜೀವಿತಾವಧಿ ಇಂಥ ಅತ್ಯುತ್ತಮ ಸಮಯ ಮತ್ತೆ ತಮಗೆ ಸಿಗದು. ಸಮರ್ಯ ವ್ಯರ್ಥ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಒಂದು ಲಕ್ಷ ಸರ್ಕಾರಿ, ಸರ್ಕಾರೇತರ ಇಂಜಿನಿಯರಿಂಗ್, ಮೆಡಿಕಲ್ ಇತ್ಯಾದಿ ಸೀಟುಗಳಿಗೆ 25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ನನ್ನಿಂದ ಸಾಧ್ಯವಾಗದೆಂಬ ಆಲೋಚನೆ ಬೇಡ. ಸಾಧನೆ ಎಂಬುದು ಏಕಾಏಕಿ ಸಿಗುವಂಥದ್ದಲ್ಲ. ಆಸೆ, ಆಕಾಂಕ್ಷೆಗಳ ತ್ಯಾಗದೊಂದಿಗೆ ಸತತ ಪರಿಶ್ರಮದ ಅಧ್ಯಯನ ಮೂಲಕ ಗುರಿ ಸಾಧಿಸಬೇಕು. ಹಾರ್ಡ್‌ವರ್ಕ್‌ಗಿಂತ ಸ್ಮಾರ್ಟ್‌ವರ್ಕ್ ಮುಖ್ಯ ಎಂದರು.
ವಿಜ್ಞಾನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ದೇಶಕ್ಕೆ ಹೆಮ್ಮೆ ತರುವಂಥ ವಿಷಯ. ಪಾಲಕರು, ಪ್ರಾಧ್ಯಾಪಕರ ಕನಸನ್ನು ನನಸುಗೊಳಿಸಬೇಕು. ಎಂಥ ಸನ್ನಿವೇಶ ಬಂದರೂ ಧೃತಿಗೆಡೆದೆ, ದುಡುಕಿನ ನಿರ್ಧಾರಕ್ಕೆ ಮುಂದಾಗದೆ ಯಶಸ್ಸನ್ನು ಸಾಧಿಸಬೇಕು ಎಂದು ಹೇಳಿದರು.
ಮುಖ್ಯಅತಿಥಿ ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ ಮಾತನಾಡಿ, ಒಂದು ಪರೀಕ್ಷೆ ತಮ್ಮ ಜೀವನವನ್ನು ನಿರ್ಧರಿಸಬಾರದು, ನಿರಾಸೆಯನ್ನೂ ತರಿಸಬಾರದು ಎಂದರು.
ಮೊದಲು ಕೋಚಿಂಗ್ ಎಂಬುದು ಕಡ್ಡಾಯವೆಂದಾಗಿತ್ತು. ಇಂಟರ್‌ನೆಟ್ ಯುಗದಲ್ಲಿ ಅಧ್ಯಯನ ಪೂರಕ ವಿಷಯ ಪಡೆಯಬಹುದು. ಇಂಜಿನಿಯರಿಂಗ್, ಡಾಕ್ಟರ್, ವಕೀಲ, ಕೃಷಿಕ, ಆಟಗಾರ, ಇತಿಹಾಸಕಾರ ಮೊದಲಾದ ಇನ್ನೂ ಉತ್ತಮ ವೃತ್ತಿಗಳಿವೆ ಎಂದು ತಿಳಿಸಿದರು.
ಸಾಧಿಸುವ ಜವಾಬ್ದಾರಿ ನಿಮ್ಮದು. ಇದಕ್ಕೆ ಪಾಲಕರು, ಪ್ರಾಧ್ಯಾಪಕರ ಬೆಂಬಲ ಮುಖ್ಯ. ಐಐಟಿಯಂಥ ಕಾಲೇಜುಗಳಲ್ಲಿರುವ ಉತ್ತಮ ಅಧ್ಯಯನ ವಾತಾವರಣ, ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುತ್ತದೆ. 18 ವರ್ಷಗಳ ಹಿಂದೆ ನಾನು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಕ್ಕೆ ಸನ್ಮಾನಿತನಾಗಿದ್ದೆ. ಆದರೆ, ಅಂದಿನ ಸಮಾರಂಭ ಇಷ್ಟೊಂದು ಅದ್ದೂರಿಯಾಗಿರಲಿಲ್ಲ ಎಂದರು.
ಪ್ರಾಚಾರ‌್ಯ ಎಸ್.ಜಿ.ಸತೀಶ್‌ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್‌ಆರ್‌ಎಸ್ ಸಂಸ್ಥೆ ಸದಾ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಸನ್ಮಾನಿತ ಹಿರಿಯ ವಿದ್ಯಾರ್ಥಿ ಎನ್.ಮದನ್ ಮಾತನಾಡಿ, ಎಂಥ ಸಮಸ್ಯೆ ಎದುರಾದರೂ ಧೈರ್ಯದಿಂದ ಎದುರಿಸಬೇಕು. ಎಲ್ಲರಿಗೂ ಸಾಧಿಸುವ ಅವಕಾಶವಿರುತ್ತದೆ. ಪ್ರಯತ್ನ, ನಂಬಿಕೆ ಮುಖ್ಯ. ತಂದೆ ತಾಯಿಗೆ ತಾವು ಕೀರ್ತಿ ತರುವಂತರಾಗಬೇಕು ಎಂದರು.
ಮತ್ತೊಬ್ಬ ಸನ್ಮಾನಿತ ಹಿರಿಯ ವಿದ್ಯಾರ್ಥಿ ಪಿ.ಟಿ.ಸೃಜನ್ ಮಾತನಾಡಿ,ಪರಿಶ್ರಮದಿಂದ ಗುರಿ ಸಾಧನೆ ಸಾಧ್ಯ. ನಮ್ಮ ಸಾಧನೆ ಪಾಲಕರಿಗೆ ತೃಪ್ತಿ ತರುವಂತಾಗಬೇಕು. ಶಿಕ್ಷಕರ ಬೆಂಬಲವೂ ಅಗತ್ಯವೆಂದ ಅವರು, ಪ್ರಾಧ್ಯಾಪಕರ ಸಹಕಾರ ಸ್ಮರಿಸಿದರು.
ಎಚ್.ವೈ.ಪ್ರಣತಿ,ಎಸ್.ನೇಹಾ,ಟಿ.ಗೀತಾ ಸೇರಿದಂತೆ ಜೆಇಇ,ನೀಟ್ ಹಾಗೂ ಬೋರ್ಡ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಹಾಗೂ ವಿ ವಿಧ ವಿಷಯಗಳಲ್ಲಿ ಶೇ.100 ಅಂಕಗಳಿಸಿದ 68ವಿದ್ಯಾರ್ಥಿಗಳು,ಅವರ ಪಾಲಕರು ಹಾಗೂ ಗಣ್ಯರನ್ನು ಗೌರವಿಸಲಾಯಿತು.ಅಧ್ಯಕ್ಷತೆ ವ ಹಿಸಿದ್ದ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರನ್ನು ಪಾಲಕರು, ವಿದ್ಯಾರ್ಥಿಗಳು ಸನ್ಮಾನಿಸಿ,ಗೌರವಿಸಿ ದರು.
ಸಂಸ್ಥೆ ಉಪಾಧ್ಯಕ್ಷ ಬಿ.ಎಲ್.ಅಮೋಘ್, ಆಡಳಿತಾಧಿಕಾರಿ ಟಿ.ಎಸ್.ರವಿ, ಡಿ.ಶ್ರೀನಿವಾಸಕುಮಾರ್, ರಾಮಕೃಷ್ಣಶಾಸ್ತ್ರಿ, ಮನೋಹರ್,ಪ್ರಭಾಕರ್, ನಂದಕುಮಾರ್, ಅಮನ್ ಇದ್ದರು.
*ಕೋಟ್
ನಿರಂತರ ಅಧ್ಯಯನದಿಂದ ಗುರಿ ಮುಟ್ಟಬಹುದು. ವಿದ್ಯಾರ್ಥಿಗಳ ಸಾಧನೆ ಅವರ ಪಾಲಕರಿಗೆ ಕೀರ್ತಿ ತರಬೇಕು. ಯಶಸ್ಸಿಗಿಂತ ಸಿಹಿಯಾದ ವಿಚಾರ ಜಗತ್ತಿನಲ್ಲಿ ಮತ್ತೊಂದಿಲ್ಲ. ಕಠಿಣ ಪರಿಶ್ರಮಕ್ಕೆ ಪರ್ಯಾಯವೆಂಬುದು ಇಲ್ಲ.
ಧರ್ಮೇಂದರ್‌ಕುಮಾರ್‌ಮೀನಾ, ಎಸ್‌ಪಿ
*ಕೋಟ್
ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂಬ ಕಾರಣಕ್ಕೆ ಪ್ರತಿ ವರ್ಷ ಸಾಧಕರೊಂದಿಗೆ ಸಂವಾದ ಕಾರ‌್ಯಕ್ರಮ ಆಯೋಜಿಸಲಾಗುತ್ತಿದೆ. ಜೀವನದಲ್ಲಿ ಪಿಯುಸಿ ತುಂಬಾ ಮಹತ್ವದ ಘಟ್ಟ. ಹಾಗಾಗಿ ಎಚ್ಚರಿಕೆ, ಶ್ರದ್ಧೆ ಹಾಗೂ ನಿರಂತರ ಅಧ್ಯಯನ ಬಹಳ ಮುಖ್ಯ. ಮುಂದಿನ ದಿನಗಳಲ್ಲಿ ಕೆಎಎಸ್, ಐಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಪೂರಕ ವಾತರವಣ ಕಲ್ಪಿಸುವ ಉದ್ದೇಶವಿದೆ.
ಬಿ.ಎ.ಲಿಂಗಾರೆಡ್ಡಿ, ಅಧ್ಯಕ್ಷ, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ