ಸಾಧನೆ ಆಧಾರದಡಿ ಸ್ತ್ರೀಯರನ್ನು ಗುರ್ತಿಸಬೇಕು- ಪ್ರಾಧ್ಯಾಪಕಿ ಪ್ರೊ.ವಿಜಯಾದೇವಿ ಹೇಳಿಕೆ

vani-1.jpg
Published on

ದಾವಣಗೆರೆ:ಸ್ತ್ರೀಯರನ್ನು ಜ್ಞಾನ, ಸಾಮರ್ಥ್ಯ ಹಾಗೂ ಸಾಧನೆ ಆಧಾರದ ಮೇಲೆ ಗುರುತಿಸುವ ಕೆಲಸವಾಗಬೇಕು ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ ಪ್ರಾಧ್ಯಾಪಕಿ ಪ್ರೊ.ವಿಜಯಾದೇವಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ, ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ 28ನೇ ವಾರ್ಷಿಕೋತ್ಸವ ಹಾಗೂ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಲೋಕವಿಂದು ಮಹಿಳೆಯರನ್ನು ರೂಪ-ಬಣ್ಣಗಳಿಂದ ನೋಡುತ್ತಿದೆಯೇ ಹೊರತು ಸಾಮರ್ಥ್ಯದ ನೆಲೆಯಲ್ಲಿ ಗುರುತಿಸುತ್ತಿಲ್ಲ. ಭಾರತದ ಮಹಿಳಾ ಚಿಂತನೆಗಳು ಬೇರೆ ರಾಷ್ಟ್ರಗಳನ್ನು ಆಳುತ್ತಿವೆ. ಆದರೆ ನಾವು ಎಲ್ಲಿದ್ದೇವೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ರಾಮನ ಹೆಸರನ್ನು ಹೇಳುವ ಕಾಲುಭಾಗ ಮಾತ್ರವೇ ಸೀತೆಯನ್ನು ಸ್ಮರಿಸುತ್ತೇವೆ. ಸಾಧಕ ಮಹಿಳೆಯರ ಶೌರ್ಯ, ಪ್ರತಾಪ, ಬುದ್ಧಿವಂತಿಕೆಯನ್ನು ಹೇಳದಿದ್ದರೆ ಅದು ಮುಂದಿನ ಪೀಳಿಗೆಗೆ ತಿಳಿಯುವುದಿಲ್ಲ. ಹೆಣ್ಣುಮಕ್ಕಳು ಪ್ರಶ್ನಿಸಬಾರದು ಎಂಬುದು ನಮ್ಮ ಕುಟುಂಬಗಳಿಂದಲೇ ಬೋಧನೆ ಆಗಿದೆ. ಪ್ರಶ್ನಾ ಮನೋಭಾವ ಮೊಟಕಾದರೆ ನಮ್ಮ ಜ್ಞಾನ ವಿಸ್ತರಣೆ ಆಗುವುದಿಲ್ಲ ಎಂದು ಹೇಳಿದರು.

ಬಾಂಧವ್ಯ ಬೆಸೆದು ಆನಂದ ಕೊಡುವ ಶಕ್ತಿ ಸಾಹಿತ್ಯಕ್ಕಿದೆ. ಎಲ್ಲಾ ಸಾಹಿತ್ಯದ ಪ್ರಕಾರಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವುದು ಸಾಹಿತ್ಯ ಪರಿಷತ್ತಿಗೆ. ಮಹಿಳಾ ಸಾಹಿತಿಗಳು ಯಾವತ್ತೂ ಕಳೆದು ಹೋಗಬಾರದು ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಒತ್ತಾಯಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸೋಮವಾರ ಮುಖ್ಯಮಂತ್ರಿ ಸೇರಿ ಶಾಸಕರಿಗೆ ಪತ್ರ ರವಾನಿಸಲಾಗುವುದು ಎಂದು ಹೇಳಿದರು.

ವನಿತಾ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಮಲ್ಲಮ್ಮ ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು.

ಸಾಹಿತಿ ಡಿ.ಸಿ. ಚಂಪಾ ಅವರಿಗೆ ಹೊನ್ನೇನಹಳ್ಳಿ ಹನುಮಕ್ಕ ನಂಜಪ್ಪ ಮೆಳ್ಳೇಕಟ್ಟೆ ಸ್ಮರಣಾರ್ಥ ‘ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೇಖಕ ಕೆ.ಆರ್. ಸುಮತೀಂದ್ರ ರಚಿತ ‘ತ್ಯಾಗಮಯಿ’ ಕಥಾ ಸಂಕಲನ ಬಿಡುಗಡೆಗೊಳಿಸಲಾಯಿತು. ವೀಣಾ ಕೃಷ್ಣಮೂರ್ತಿ ಸ್ವಾಗತಿಸಿದರು. ಜಯಶೀಲಾ ಷಡಾಕ್ಷರಪ್ಪ, ಬಿ.ಕೆ. ಬಸವರಾಜಪ್ಪ ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net