

ಧಾರವಾಡ: ನಗರದ ಕೆಲಗೇರಿಯ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ತತ್ಸಮಸಿ ಸನ್ನಿಧಾನ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಗ್ರಾಮದ ಸಾಧಕರನ್ನು ಸನ್ಮಾನಿಸಲಾಯಿತು.
ನೀಟ್ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆದ ಪೂರ್ಣಿಕಾ ಕಟಗಿ, ಬಿಎಸ್ಸಿ ನರ್ಸಿಂಗ್ ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು 2 ಚಿನ್ನದ ಪದಕ ಪಡೆದ ವೀಣಾ ಶಿಗ್ಗಾಂವಿ, ರಾಜ್ಯಮಟ್ಟದ ವಿದ್ಯಾರ್ಥಿವೇತನ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಗಾಯಿತ್ರಿ ಹಳೇಮನಿ ಹಾಗೂ ಪಿಎಚ್.ಡಿ. ಪದವಿ ಪಡೆದ ಸಾವಿತ್ರಿ ಹಿರೇಮಠ ಅವರನ್ನು ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ ಹಾಗೂ ಗ್ರಾಮದ ಹಿರಿಯರು ಗೌರವಿಸಿದರು.
ನಂತರ ಮಾತನಾಡಿದ ಚಂದ್ರಕಲಾ, ಕೆಲಗೇರಿ ಗ್ರಾಮದಲ್ಲಿ ಹಳ್ಳಿ ವಾತಾವರಣ ಇದ್ದರೂ ನಗರದ ಪ್ರಭಾವ ಸಾಕಷ್ಟಿದೆ. ಹೀಗಾಗಿ ಇಲ್ಲಿಯ ಯುವಜನಾಂಗ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ಆದರೆ, ಅವರ ಪ್ರತಿಭೆ, ಸಾಧನೆ ಗುರುತಿಸಲಾಗಿಲ್ಲ. ಅವರ ಸಾಧನೆ ಗುರುತಿಸಿ ಪ್ರೋತ್ಸಾಹಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.