

ಮೈಸೂರು: ಜೆಎಸ್‌ಎಸ್ ಸಂಸ್ಥೆ ಅರ್ಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅನುಕರಣೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.
ನಗರದ ರಾಜೇಂದ್ರ ಭವನದಲ್ಲಿ ಸುತ್ತೂರು ಮಠ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಮತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಿನ ಕಾಲದಲ್ಲಿ ಸಾಧಕರಿಗಿಂತ ಸಮಯ ಸಾಧಕರು ಹೆಚ್ಚು. ಪ್ರಶಸ್ತಿ ಪಡೆದುಕೊಳ್ಳುವವರಿಗಿಂತ ಹೊಡೆದುಕೊಳ್ಳುವವರು ಅಧಿಕ. ಇಂತಹ ಸಂದರ್ಭದಲ್ಲಿ ಜೆಎಸ್‌ಎಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
2021ನೇ ಸಾಲಿನ ‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’ ಸ್ವೀಕರಿಸಿದ ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಅನೇಕ ಸಾಹಿತಿಗಳು ಪ್ರಶಸ್ತಿ ಪಡೆದುಕೊಳ್ಳುತ್ತಿರುವುದನ್ನು 30 ವರ್ಷದ ಹಿಂದೆ ಒಂದು ಮೂಲೆಯಲ್ಲಿ ನಿಂತು ಗಮನಿಸುತ್ತಿದ್ದೆ. ಅದನ್ನು ನೋಡಿ ನಾವೆಲ್ಲ ಈ ರೀತಿ ಆಗಲು ಸಾಧ್ಯವೇ ಎಂಬ ಪ್ರಶ್ನೆ ಕಾಡಿತ್ತು. ಆದರೀಗ ಗುರುಗಳ ಆಶೀರ್ವಾದದ ಫಲವಾಗಿ ಪ್ರಶಸ್ತಿಗೆ ಭಾಜನವಾಗಿರುವೆ ಎಂದರು.
ಎಲ್ಲರಿಗೂ ಭಾಗ್ಯಗಳು ಒಲಿದು ಬರುತ್ತವೆ. ಆದರೆ, ಇಂಥ ಭಾಗ್ಯ ನನಗೆ ಬಂದಿರುವುದು ಜೀವನದ ಅವಿಸ್ಮರಣೀಯ ಕ್ಷಣ. ಕಾಯಕ, ದಾಸೋಹ, ಸಮಾಜ ಸೇವೆ ಎಂದರೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ನೆನಪಾಗುತ್ತಾರೆ ಎಂದು ಅವರು ಹೇಳಿದರು.
ಈ ಮಠದ ವಿದ್ಯಾರ್ಥಿಯಾಗಿದ್ದ ಅರ್ಥಶಾಸ್ತ್ರಜ್ಞ ಡಾ.ಡಿ.ಎಂ.ನಂಜುಂಡಪ್ಪ ಒಂದು ಮಾತು ಹೇಳಿದ್ದರು. ‘ನಾನು ಮಹಾಗುರುವಿನ ದೃಷ್ಟಿಗೆ ಬೀಳದಿದ್ದರೆ ಯಾವುದೋ ಮೂಲೆಯಲ್ಲಿ ಬಿದ್ದ ಕಸವಾಗಿ ಹೋಗುತ್ತಿದ್ದೆ. ಯಾವಾಗ ಮಹಾಗುರುವಿನ ದೃಷ್ಟಿಗೆ ಬಿದ್ದೆನೋ ಆವಾಗ ನನ್ನ ಬದುಕು ಬದಲಾಯಿತು. ಗುರುವಿನ ಅಂತಃಕರಣದಿಂದ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯವಾಯಿತೆಂದು ಸ್ಮರಿಸಿದ್ದರು ಎಂದು ತಿಳಿಸಿದರು.
ಉಚಿತ ನೋಂದಣಿ ಮಾಡಿಕೊಳ್ಳಿ: ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಇದರ ಮೂಲಕ ಪುಸ್ತಕ, ದಿನಪತ್ರಿಕೆಗಳು ಇನ್ನಿತರ ಕೃತಿಗಳನ್ನು ಓದಬಹುದು. ಇದಕ್ಕಾಗಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಬಿ.ಮಂಜುನಾಥ್ ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗದಗಿನ ಶಿವಾನಂದ ಮಠದ ಶ್ರೀ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶ್ರೀ ಪ್ರಭುಚನ್ನಬಸವ ಸ್ವಾಮೀಜಿಗೆ ಪ್ರಶಸ್ತಿ
2021ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಯನ್ನು ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ 25 ಸಾವಿರ ರೂ. ಗೌರವಧನ, ಸ್ವಸ್ತಿವಾಚನ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಅವರು ರಚಿಸಿರುವ 216 ವಿಶ್ವವಿಭೂತಿಗಳ ಜೀವನ ಹಾಗೂ ಸಾಧನೆಗಳನ್ನು ಪರಿಚಯಿಸುವ ‘ಮಹಾತ್ಮರ ಚರಿತಾಮೃತ’ ಕೃತಿಗೆ ಈ ಪ್ರಶಸ್ತಿ ಸಂದಿದೆ. 2020ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಭಾಜನರಾಗಿರುವ ಬೆಂಗಳೂರಿನ ಗೊಟ್ಟಿಗೆರೆಯ ಸ್ವಾಮಿ ವಿವೇಕಾನಂದ ಶೈಕ್ಷಣಿಕ ಅನುಸಂಧಾನದ ನಿರ್ದೇಶಕ ಡಾ.ಎಚ್.ಎನ್.ಮುರಳೀಧರ್ ಗೈರಾಗಿದ್ದರು. ಅವರ ಸುಳಿವ ಜಂಗಮ ಮತ್ತು ಅನಿಯಮ ಕೃತಿಗೆ ಪ್ರಶಸ್ತಿ ಬಂದಿದೆ.
ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ 1983ರಿಂದ ಸಾಹಿತ್ಯ, ಧರ್ಮ, ಸಂಸ್ಕೃತಿ ಕುರಿತಂತೆ ಪ್ರಕಟವಾಗುವ ಉತ್ತಮ ಕೃತಿಗೆ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುತ್ತಿದೆ. ಈವರೆಗೆ 32 ಕೃತಿಗಳಿಗೆ ಪ್ರಶಸ್ತಿ ನೀಡಲಾಗಿದೆ.
ದತ್ತಿ ಪ್ರಶಸ್ತಿ:
2021ನೇ ಸಾಲಿನ ಎಂ.ವೀರಪ್ಪ ದತ್ತಿ ಪ್ರಶಸ್ತಿಯನ್ನು (68 ಸಾವಿರ ರೂ. ಗೌರವಧನ) ಬೆಂಗಳೂರಿನ ಹಿರಿಯ ಕಲಾವಿದ ಜಿ.ಆರ್. ಗೋವಿಂದರಾಜು ಮತ್ತು ಡಿ.ವಿ. ಹಾಲಭಾವಿ ಪ್ರಶಸ್ತಿಯನ್ನು (10 ಸಾವಿರ ರೂ.ಗೌರವಧನ) ಮಂಗಳೂರಿನ ಕಲಾವಿದ ಕೆ.ಪುರುಷೋತ್ತಮ್ ಅವರಿಗೆ ನೀಡಲಾಯಿತು.
3 ಕೃತಿ ಬಿಡುಗಡೆ:
ಸಮಾರಂಭದಲ್ಲಿ 3 ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಜೆಎಸ್‌ಎಸ್ ಗ್ರಂಥಮಾಲೆಯಿಂದ ಪ್ರಕಟವಾಗಿರುವ ಪ್ರೊ.ಚಂದ್ರಶೇಖರಯ್ಯ ರಚಿತ ‘ದಿ ಹೆರಿಟೇಜ್ ಆಫ್ ಸುತ್ತೂರು ಮಠ’, ಜಿ.ಎಂ.ಶಿವಪ್ರಸಾದ್ ರಚನೆಯ ‘ಕ್ಯಾತನಹಳ್ಳಿ ಸಾಹುಕಾರ್ ಸಿದ್ದಲಿಂಗಯ್ಯ’, ಪ್ರೊ.ಎಂ.ನಟರಾಜ್ ಅವರ ‘ನಾಟ್ಯ ಕಲಾವಿಶಾರದ ಎಂ.ಸಿ.ಮಹದೇವಸ್ವಾಮಿ’ ಕೃತಿ ಬಿಡುಗಡೆ ಮಾಡಲಾಯಿತು.