ಸಾಧಕರನ್ನು ಸೃಷ್ಟಿಸಿದ ಆರ್​ಎಸ್​ಎಸ್

28 YLP 02
Published on

ಯಲ್ಲಾಪುರ: ವ್ಯಕ್ತಿ ನಿರ್ಮಾಣ ಕಾರ್ಯದ ಮೂಲಕ ದೇಶದ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡಿದೆ. ಸಂಘದ ಸಂಸ್ಕಾರ ಶಾಂತಾರಾಮ ಸಿದ್ದಿ ಅವರಂಥ ಅನೇಕ ಸಾಧಕರನ್ನು ಸೃಷ್ಟಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಹೇಳಿದರು.

ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನೂತನ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಂತಾರಾಮ ಅವರಿಗೆ ಇಂಥ ಉನ್ನತ ಸ್ಥಾನ ನೀಡಿರುವುದು ಅವರ ಸೇವಾ ಪರಿಕಲ್ಪನೆಗೆ ನೀಡಿದ ಗೌರವ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕರಿಗೆ ಅಭಿಮಾನದ ಸಂಗತಿ. ಸಮಾಜ, ಸಂಸ್ಕೃತಿ, ಸರ್ಕಾರಕ್ಕೆ ಗೌರವ ತರುತ್ತ, ಸಮಾಜ ನಿರ್ವಣದ ಕಾರ್ಯವನ್ನು ಶಾಂತಾರಾಮ ಅವರು ಮಾಡಲಿ ಎಂದರು.

ಶಾಂತಾರಾಮ ಸಿದ್ದಿ ದಂಪತಿಯನ್ನು ಹಾಗೂ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ಪರಶುರಾಮ ಗಿರಗೋಲಿ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.

ಅಭಿನಂದನೆ ಸ್ವೀಕರಿಸಿದ ಶಾಂತಾರಾಮ ಸಿದ್ದಿ ಮಾತನಾಡಿ, ಪ್ರಕಾಶ ಕಾಮತ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ವನವಾಸಿ ಕಲ್ಯಾಣದಲ್ಲಿ ಕಾರ್ಯನಿರ್ವಸುತ್ತ ಬಂದೆ. ಸರ್ಕಾರದ ಇತಿಮಿತಿಯಲ್ಲಿ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತೇನೆ. ಬುಡಕಟ್ಟು, ವನವಾಸಿಗಳ ಸಂಪ್ರದಾಯದ ರಕ್ಷಣೆಗೂ ಆದ್ಯತೆ ನೀಡುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಜಿಲ್ಲಾ ಉಪಾಧ್ಯಕ್ಷ ಉಮೇಶ ಭಾಗ್ವತ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹಳಿಯಾಳದ ಬಸ್ಱಾಂವ ಸಿದ್ದಿ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ಸಿದ್ದಿ ಸಮುದಾಯದ ಮುಖಂಡರು ಬಿಜೆಪಿ ಸೇರಿದರು.

ಸಂಸದ ಅನಂತಕುಮಾರ ಹೆಗಡೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಾಸಕ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ, ಮಾಜಿ ಶಾಸಕ ವಿವೇಕಾನಂದ ವೈದ್ಯ, ಸುನೀಲ ಹೆಗಡೆ, ಕೆ.ಜಿ. ನಾಯ್ಕ, ತಾಲೂಕಾಧ್ಯಕ್ಷ ಜಿ.ಎನ್. ಗಾಂವ್ಕಾರ, ಉಪಾಧ್ಯಕ್ಷ ವೆಂಕಟ್ರಮಣ ಬೆಳ್ಳಿ, ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ, ಡಾ. ರವಿ ಭಟ್ಟ ಬರಗದ್ದೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net