ಸಾಧಕರನ್ನು ಸನ್ಮಾನಿಸಿದ ಜಿಲ್ಲಾಧಿಕಾರಿ

11 vikram 14
Published on

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಹೊಂದಬೇಕಲ್ಲದೆ, ಸಾಧನೆ ಮಾಡಲು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸನ್ಮಾನಿಸಿ ಅವರು ಮಾತನಾಡಿದರು.

ತಮ್ಮ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ನೆನಪಿಸಿಕೊಂಡ ಜಿಲ್ಲಾಧಿಕಾರಿ, ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ವಿಜಯಪುರ ಜಿಲ್ಲೆಗೆ ಹೆಮ್ಮೆ ಎನಿಸಿದ್ದೆ. ಅಂದಿನಿಂದ ಉನ್ನತ ಗುರಿ ಹೊಂದಿ ಅಧ್ಯಯನ ಮಾಡುತ್ತ ಸಾಧನೆ ಮಾಡಿದೆ ಎಂದರು. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಿ, ಏಕಾಗ್ರತೆ, ಮನೋಸ್ಥೈರ್ಯದಿಂದ ಸಾಧನೆ ಮಾಡಬೇಕು ಎಂದರು.

ಹೆಚ್ಚು ಅಂಕಗಳನ್ನು ಪಡೆದ ಧಾರವಾಡ ಬಾಲಬಳಗ ಸೃಜನಶೀಲ ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ ಭಟ್, ಹುಬ್ಬಳ್ಳಿ ಅಕ್ಷಯ ಕಾಲನಿ ಚೇತನ ಪಬ್ಲಿಕ್ ಶಾಲೆಯ ಅನನ್ಯ ಕಡಕೋಳ, ಹುಬ್ಬಳ್ಳಿಯ ಅರುಣ ಅಕ್ಕಿ, ಕುಂದಗೋಳ ತಾಲೂಕು ಹೀರೆಹರಕುಣಿ ಸರ್ಕಾರಿ ಪ್ರೌಢಶಾಲೆಯ ರೇಖಾ ಗುರಯ್ಯನವರ, ಹುಬ್ಬಳ್ಳಿ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸೃಷ್ಟಿ ಸೊಗಲದ ಹಾಗೂ ಧಾರವಾಡ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯದ ತೇಜಸ್ವಿನಿ ಜೋತೆಪ್ಪನವರ ಅವರನ್ನು ಸನ್ಮಾನಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್. ಹಂಚಾಟೆ, ಶಿಕ್ಷಣಾಧಿಕಾರಿಗಳು, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಬ್ಬಂದಿ, ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರುಗಳು, ಪಾಲಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net