

ಚಾಮರಾಜನಗರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ, ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ, ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ, ಭಕ್ತಿಗೀತೆಗಳ ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್ ತುಂಬಾ ಪ್ರಸಿದ್ಧಿ ಪಡೆದಿತ್ತು. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ವಜ್ರಮುಷ್ಠಿ ಕಾಳಗದಲ್ಲಿ ಚಾಮರಾಜನಗರ ಜೆಟ್ಟಿ ಜನಾಂಗದವರು ಭಾಗವಹಿಸಿ ಪ್ರಶಸ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಶ್ಲೋಕ ಪಠಿಸಿ ವಿಶ್ವದಾಖಲೆ ಮಾಡಿರುವ ಚಿರಂಜೀವಿ ಡಾ.ಪೃಥುಪಿ ಅದ್ವತ್ ಅವರಿಗೆ ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಕ್ರೀಡಾ ತರಬೇತುದಾರ ಶಿವು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿದ್ಯಾಲಯ ಸಂಚಾಲಕಿ ದಾನೇಶ್ವರಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಬಸಬವರಾಜೇಂದ್ರ, ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಎಚ್.ಜಿ.ಕುಮಾರಸ್ವಾಮಿ, ಈಶ್ವರಿ ಸೋಷಿಯಲ್ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ವೆಂಕಟೇಶ್, ಮುಡಿಗುಂಡ ಜೆ.ಮೂರ್ತಿ ಹಾಜರಿದ್ದರು.