

ಹುಕ್ಕೇರಿ: ಅಂತಾರಾಜ್ಯ ಮಹಾ ವಿದ್ಯಾಲಯದ ಕ್ರೀಡಾಕೂಟದಲ್ಲಿ ವಿಶೇಷ ಸಾಧನೆ ಮಾಡಿರುವ ಸಾಧಕರಿಗೆ ಸಂಸ್ಥೆಯಿಂದ ಅಗತ್ಯ ನೆರವು ನೀಡುವುದಾಗಿ ತುಬಚಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಿಂಟು ಶೆಟ್ಟಿ ಹೇಳಿದರು.
ಪಟ್ಟಣದ ತುಬಚಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಜಯಪುರದ ಅಂಬೇಡ್ಕರ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತಾರಾಜ್ಯ ಮಹಾವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಪಠ್ಯದೊಂದಿಗೆ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡಿರುವುದನ್ನುಇತರ ಸಹಪಾಠಿಗಳು ಸೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.
21 ಕಿ.ಮೀ. ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ರೇಣುಕಾ ರೇವಣ್ಣವರ ಹಾಗೂ ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಸುನೀಲ ಕುಬಸಗಾರ, ವಿನೋದ ಕರಿ, ಧರೆಪ್ಪ ಮಗದುಮ್ಮ, ರವಿಚಂದ್ರ ಘಸ್ತಿ, ವಿಶಾಲ ಬಡಿಗೇರ, ಯಲ್ಲಾಲಿಂಗ ಹೊಸಮನಿ ಅವರನ್ನು ಸತ್ಕರಿಸಲಾಯಿತು.
ಎಸ್.ಬಿ.ಬುರ್ಜಿ, ಬಿ.ಎಸ್.ಪಾಟೀಲ, ಪ್ರಾಚಾರ್ಯೆ ಡಾ.ಸರ್ವಮಂಗಳಾ ಕಮತಗಿ, ಎಸ್.ಆರ್.ಘಸ್ತಿ, ಬಿ.ಕೆ.ಕೋಟಗಿ, ಬಿ.ಎಲ್.ನಾಯಿಕ, ಅನಿತಾ ದಾದುಗೋಳ ಇತರರಿದ್ದರು.