

ಚಿತ್ರದುರ್ಗ: ಹಿಂದು ಧರ್ಮವನ್ನು ನಿಂದಿಸಿರುವ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಅತೀ ಹಿಂದುಳಿದ ಮಠಾಧೀಶರ ಮಹಾಸಭಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರಣವಾನಂದರಾಮ್ ಶ್ರೀ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವ ಧರ್ಮ, ಲಿಂಗಾಯತ ಧರ್ಮ ಶ್ರೇಷ್ಠ. ಬಸವ ಅನುಯಾಯಿಗಳಾದ ನಾವುಗಳು ಎಲ್ಲ ಧರ್ಮಗಳನ್ನು ಪ್ರೀತಿಸಬೇಕೆ ಹೊರತು ನಿಂದಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹೊಂದಾಣಿಕೆ ರಾಜಕೀಯದಿಂದ ವ್ಯವಸ್ಥೆ ಹದಗೆಟ್ಟಿದೆ. ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾದಲ್ಲಿ ವಿರೋಧ ಪಕ್ಷದಲ್ಲಿದ್ದಾಗ ಹೋರಾಟ, ಪಾದಯಾತ್ರೆ ಮಾಡುತ್ತೀರಿ. ಅಧಿಕಾರಕ್ಕೆ ಬಂದ ಮೇಲೇಕೆ ಮರೆಯುತ್ತೀರಿ ಎಂದು ಯಾವುದೇ ಪಕ್ಷ, ಮುಖಂಡರ ಹೆಸರು ಪ್ರಸ್ತಾಪಿಸದೆ, ಹರಿಹಾಯ್ದರು.
ಕರ್ನಾಟಕದ ಅಕ್ಕ-ಪಕ್ಕದ ರಾಜ್ಯಗಳು ಅಭಿವೃದ್ಧಿಯಾಗುತ್ತಿವೆ. ಅಂತಹ ರಾಜಕಾರಣ ಮಾಡುವುದನ್ನು ಬಿಟ್ಟು ವೈಯಕ್ತಿಕ ಹಿತಾಸಕ್ತಿಗೆ ಮುಂದಾಗಿರುವ ಕಾರಣ ಅಭಾಸ ಉಂಟಾಗುತ್ತಿದೆ ಎಂದು ಕಿಡಿಕಾರಿದರು.
ಸರ್ದಾರ್ ಸೇವಾಲಾಲ್ ಶ್ರೀ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟ ಅನುದಾನದಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಸಿಎಂ ಗ್ಯಾರಂಟಿ ಯೋಜನೆಗೆ ಬಳಸಿದ್ದು, ಸರಿಯಲ್ಲ. ಹಿಂದುಳಿದ ಸಮಾಜಗಳ ಪ್ರಗತಿಗೆ ಮಾತ್ರ ಬಳಕೆಯಾಗಬೇಕು ಎಂದು ಒತ್ತಾಯಿಸಿದರು.