

ಮೈಸೂರು: ಸಾಗುವಳಿ ಜಮೀನು ಮಂಜೂರಾತಿಗೆ ಆಗ್ರಹಿಸಿ ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟೈಗರ್ ಬ್ಲಾಗ್ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನಿವಾಸಿಗಳು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೃಷಿ ಕೂಲಿಕಾರು ಒಂದಾಗಿ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಟೈಗರ್ ಬ್ಲಾಕ್ ಮುಖಂಡ ಈವನ್‌ರಾಜ್ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡುವುದಾಗಿ ಹೇಳಿ ಒಕ್ಕಲೆಬ್ಬಿಸಿದರು. ಮರಳಿ ತಮ್ಮ ಮೂಲ ಸ್ಥಳಕ್ಕೆ ಬಿಡುತ್ತಿಲ್ಲ. ವ್ಯವಸ್ಥಾಯಕ್ಕೆ ಜಮೀನೂ ಇಲ್ಲದೇ ಪರಿತಪಿಸುವಂತಾಗಿದೆ. ನಾವು ಹಿಂದೆ ವಾಸವಿದ್ದ ಸ್ಥಳವನ್ನು ಚಾಮರಾಜಒಡೆಯರ್ ಅವರು ದಾನವಾಗಿ ನೀಡಿದ್ದರು. ಕಾಡು ಕುರುಬರು, ಹಕ್ಕಿಪಿಕ್ಕಿ ಜನಾಂಗದವರು ವಾಸವಿದ್ದರು. ಅಲ್ಲಿ ನಮ್ಮ ದೇವಸ್ಥಾನ, ಸ್ಮಶಾನ, ಕೆರೆಯಿದ್ದು, ಅರಣ್ಯ ಅಧಿಕಾರಿಗಳು ಸಾಕಿದ ಆನೆ ಬಿಟ್ಟು ಒಕ್ಕಲೆಬ್ಬಿಸಿದರು ಎಂದು ಆರೋಪಿಸಿದರು.
ಟೈಗರ್ ಬ್ಲಾಕ್‌ನಲ್ಲಿ ಹಕ್ಕಿಪಿಕ್ಕಿ ಜನಾಂಗದ 250 ಕುಟುಂಬಗಳಿವೆ. ಇವರ ಪೈಕಿ 10 ಜನರಿಗೆ ಮಾತ್ರ ವ್ಯವಸಾಯಕ್ಕೆ ಜಮೀನು ಇದೆ. ಉಳಿದವರು ಸಣ್ಣಪುಟ್ಟ ವ್ಯಾಪಾರ ಮಾಡುತ್ತ ಜೀವನ ನಡೆಸುತ್ತಿದ್ದಾರೆ. ಇವರಿಗೂ ವ್ಯವಸಾಯಕ್ಕೆ ಜಮೀನು ನೀಡಿದರೆ ಜೀವನ ಸುಧಾರಣೆ ಆಗಲಿದೆ. ಈ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಸಿದರೂ ಸರ್ಕಾರ ನಮ್ಮ ಸಮಸ್ಯೆ ಆಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳು:
ಎಂ-ನರೇಗಾ ಕೂಲಿಯನ್ನು 600 ರೂ.ಗೆ ಏರಿಕೆ ಮಾಡಬೇಕು. ಮೇಟಿಗಳಿಗೆ, ತಾಂತ್ರಿಕ ಸಿಬ್ಬಂದಿಗೆ ಸೇವಾ ಭದ್ರತೆ ನೀಡಿ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಬೇಕು. ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಣೆ ಮಾಡಬೇಕು. 55 ವರ್ಷ ದಾಟಿದ ಕೃಷಿ ಕೂಲಿಕಾರರಿಗೆ ಮಾಸಿಕ 5 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು. ಹೊಸ ಕಾರ್ಮಿಕ ಸಂಹಿತೆ ಮತ್ತು 2020ರ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆ 28 ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.
ಹಿರಿಯ ಹೋರಾಟಗಾರ್ತಿ ರತಿರಾವ್, ಚೌಡಳ್ಳಿ ಜವರಯ್ಯ, ರವಿಕುಮಾರ್, ಚಂದಮಾರು, ಕಲಾ, ಸುಂದರೇಶ್, ಸೋಮಣ್ಣ, ರವೀಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.