

ಸಾಗರ: ಸಾಕುನಾಯಿ ಸೇರಿದಂತೆ ಸಾಕುಪ್ರಾಣಿಗಳ ಆರೋಗ್ಯ ರಕ್ಷಣೆ ಪಾಲನೆ ಮಾಡುವವರ ಹೊಣೆಗಾರಿಕೆ ಆಗಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.
ಪಶುಪಾಲನಾ ಇಲಾಖೆಯಲ್ಲಿ ಗುರುವಾರ ಆಯೋಜಿಸಿದ್ದ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ನಾವು ಸಾಕಿದ ಪ್ರಾಣಿಗಳನ್ನು ಸಹ ರಕ್ಷಣೆ ಮಾಡಿಕೊಳ್ಳಬೇಕು. ಮುಂದಿನ 15 ದಿನಗಳ ಕಾಲ ಉಚಿತವಾಗಿ ರೇಬಿಸ್ ವಿರುದ್ಧ ಲಸಿಕೆಯನ್ನು ಪಶುಪಾಲನಾ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದರು.
ನಗರಸಭೆ ಉಪಾಧ್ಯಕ್ಷ ವಿ.ಮಹೇಶ್ ಮಾತನಾಡಿ, ನಾಯಿಯನ್ನು ತಮ್ಮ ಮನೆಯಲ್ಲಿ ಸಾಕಿದವರು ಕಾಲಕಾಲಕ್ಕೆ ಅದಕ್ಕೆ ಸೂಕ್ತವಾದ ಚುಚ್ಚುಮದ್ದು ಕೊಡಿಸುವ ಮೂಲಕ ಅವುಗಳು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕು. ಪಶುಪಾಲನಾ ಇಲಾಖೆ ಸಾಕು ಪ್ರಾಣಿಗಳ ಸಂರಕ್ಷಣೆಗೆ ಅನೇಕ ಯೋಜನೆ ಜಾರಿಗೆ ತಂದಿದ್ದು ಅದರ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.