

ಸಾಗರ: ಬೇಲೂರು ಕೃಷ್ಣಮೂರ್ತಿ ಬರೆದಿರುವ ತ್ಯಾಗಿ ನಾಟಕ ರಾಜ್ಯಾದ್ಯಂತ 700ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಅತ್ಯಂತ ಮನೋಜ್ಞವಾಗಿರುವ ತ್ಯಾಗಿ ನಾಟಕವನ್ನು ಬೆಳ್ಳಿ ಪರದೆಗೆ ತರುವ ಕೆಲಸ ನಡೆಯುತ್ತಿದ್ದು, ಕೊನೇ ಹಂತದ ಚಿತ್ರೀಕರಣ ನಡೆಯುತ್ತಿದೆ ಎಂದು ಚಿತ್ರದ ನಿರ್ವಪಕ ದಿನೇಶ್ ಹೆಗಡೆ ಅರಸಾಳು ತಿಳಿಸಿದರು.
ಹಾಸ್ಯನಟ ಹಾಗೂ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಹಾಗೂ ನಟ ಸಂತೋಷ್, ನಾಯಕಿಯಾಗಿ ಪಲ್ಲವಿ ಅಭಿನಯಿಸಿದ್ದಾರೆ. ನವೆಂಬರ್ನಲ್ಲಿ ರಾಜ್ಯದ 125 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿತ್ರದಲ್ಲಿ ಸಂಗೀತಾ ಅಶ್ವತ್ಥ್, ಆಂಜನಪ್ಪ, ಶಂಖನಾದ ಅರವಿಂದ್, ಬ್ಯಾಂಕ್ ಜನಾರ್ದನ್, ಭಾಗ್ಯಶ್ರೀ, ಶ್ರುತಿ, ಮೂಗು ಸುರೇಶ್, ಗಣೇಶ್ ರಾವ್, ಜಗ್ಗಿ, ಮೋಹನ್ ಹೀಗೆ ಬಹುತೇಕ ಪೋಷಕ ನಟರು ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಈಗಾಗಲೆ ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ನಂದಿ ಹಿಲ್ಸ್, ಆನೆಕಲ್ಲು ಮುಂತಾದೆಡೆ ಚಿತ್ರೀಕರಣ ನಡೆದಿದೆ. ಹಾಡು ಹಾಗೂ ಕ್ಲೈಮಾಕ್ಸ್ ಚಿತ್ರೀಕರಣಕ್ಕಾಗಿ ಮಲೆನಾಡಿನ ಸಾಗರ ಹಾಗೂ ಚಿಕ್ಕಮಗಳೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ನಿಟ್ಲೆ ಫಾಲ್ಸ್, ತಾಳಗುಪ್ಪ ಹಾಗೂ ಅನೇಕ ಸುಂದರ ತಾಣವನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಲಾಗಿದೆ. ಖುಷಿ ಕ್ರಿಯೇಷನ್ಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ತ್ಯಾಗಿ ಚಿತ್ರಕ್ಕೆ ಎಸ್.ಬಾಲು ನಾಗರಾಜ್ ಛಾಯಾಗ್ರಹಣ ಹಾಗೂ ನಿರ್ದೇಶಕರಾಗಿದ್ದಾರೆ. ಹಿರಿಯ ಪೋಷಕ ನಟ ಆಡಗೋಡಿ ಶ್ರೀನಿವಾಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ವರ್ಣ ಬ್ರದರ್ಸ್ ಸಂಗೀತ ನೀಡಿದ್ದು, ಗುರುರಾಜ ಹೊಸಕೋಟೆ ಮತ್ತು ವಿನು ಮನಸ್ಸು ಗೀತ ರಚನೆ ಮಾಡಿದ್ದಾರೆ ಎಂದು ಹೇಳಿದರು.
ಚಿತ್ರದ ಸಂಭಾಷಣೆ ಹಾಗೂ ಚಿತ್ರಕಥೆ ರಚನೆಕಾರ ಆಡಗೋಡಿ ಶ್ರೀನಿವಾಸ್, ಹಿರಿಯ ನಟ ಡಿಂಗ್ರಿ ನಾಗರಾಜ್, ಚಿತ್ರದ ನಿರ್ದೇಶಕ ಎಸ್.ಬಾಲು ನಾಗರಾಜ್, ನಾಯಕ ಸಂತೋಷ್, ನಾಯಕಿ ಪಲ್ಲವಿ, ನಾಗರಾಜ್ ಹಾಜರಿದ್ದರು.