

ಸಾಗರ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣವನ್ನು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಡೆಲ್ಟಾ ಯೋಜನೆಯಡಿ 1 ಕೋಟಿ, ಮುಖ್ಯಮಂತ್ರಿಗಳ ವಿಶೇಷ ಅನುದಾನ 2 ಕೋಟಿ ರೂ. ಮಂಜೂರಾಗಿದೆ. ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಾಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಈ ಹಿಂದೆ ಲೋಕಾರ್ಪಣೆ ಮಾಡಲಾಗಿತ್ತು. ಅಂದಿನಿಂದ ಹೊಸ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಇದೀಗ ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳಿಗೆ ಮೇಲ್ಚಾವಣಿ, ಮುಖ್ಯ ಕಟ್ಟಡ ಹಾಗೂ ನೆಲಕ್ಕೆ ಗ್ರಾನೈಟ್, ಜಾಗ ವಿಸ್ತರಣೆ, ಸುಸಜ್ಜಿತ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಪಾಕಿರ್ಂಗ್ ವ್ಯವಸ್ಥೆ ವಿಸ್ತರಣೆ, ಉಪಹಾರ ಗೃಹ ನವೀಕರಣ, ಮಹಿಳೆಯರಿಗೆ ವಿಶ್ರಾಂತಿ ಗೃಹ, ರಾತ್ರಿ ಪಾಳಿಯಲ್ಲಿ ತಂಗುವ ನೌಕರರಿಗೆ 10 ಹಾಸಿಗೆ ಸಾಮರ್ಥ್ಯದ ವಿಶ್ರಾಂತಿ ಗೃಹ, ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ಚತುಷ್ಪಥ ರಸ್ತೆ ನಿರ್ಮಿಸಿ ನಡುವೆ ಡಿವೈಡರ್, ವಿದ್ಯುದ್ದೀಪ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಸಾಗರಕ್ಕೆ ಬೇರೆಬೇರೆ ಭಾಗದಿಂದ ಪ್ರವಾಸಿಗರು ಬರುತ್ತಾರೆ. ಬರುವ ಪ್ರವಾಸಿಗರಿಗೆ ನಮ್ಮ ಬಸ್ ನಿಲ್ದಾಣ ಸುಂದರವಾಗಿ ಕಾಣಬೇಕು. ಬಸ್ ನಿಲ್ದಾಣದ ಒಂದು ಭಾಗದಲ್ಲಿ ಡ್ರೈನೇಜ್ ನಿರ್ಮಾಣ ಮಾಡಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅಭಿವೃದ್ಧಿ ನಂತರ ರೈಲ್ವೆ ಸ್ಟೇಷನ್ ಮುಂಭಾಗದ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ. ಸಾಗರದ ಹಳೆ ಬಸ್ ನಿಲ್ದಾಣದಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಫುಡ್‌ಕೋರ್ಟ್ ಮಾಡಲು ಟೆಂಡರ್ ಕರೆಯಲಾಗಿದೆ. ಎಲ್ಲೆಂದರಲ್ಲಿ ರಸ್ತೆಯಲ್ಲಿ ಆಹಾರ ಪದಾರ್ಥಗಳ ಅಂಗಡಿಗಳನ್ನು ತೆರೆಯದಂತೆ ಶುದ್ಧ ಆಹಾರದ ಮಾರಾಟಕ್ಕೆ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ ಎಂದರು.
ಡಿಪೋ ಮೆನೇಜರ್ ಬಿರಾದರ್, ಅರಣ್ಯ ಕೆಗಾರಿಕಾ ಅಭಿವದ್ಧಿ ನಿಗಮದ ವಿಶೇಷ ಕರ್ತವ್ಯ ಅಕಾರಿ ಟಿ.ವಿ.ರಮೇಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಸುರೇಶಬಾಬು, ಕಲಸೆ ಚಂದ್ರಪ್ಪ, ಡಿ. ದಿನೇಶ್, ಮೋಹನ್, ವಿ.ಶಂಕರ್ ಇತರರಿದ್ದರು.