ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಪತ್ತೆಯಾಗಿಲ್ಲ; ಮೃತ ಮಂಗಗಳಲ್ಲಿ ಸೋಂಕಿಲ್ಲ: ಹರತಾಳು ಹಾಲಪ್ಪ

SGR WEBBBB
Published on

ಸಾಗರ: ತಾಲೂಕಿನಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿಲ್ಲ, ಜನರು ಆತಂಕಪಡಬೇಕಾಗಿಲ್ಲ. ಆದರೆ ಜಾಗೃತಿ ಅವಶ್ಯ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಂಗನ ಕಾಯಿಲೆ ಜಾಗೃತಿ ಕುರಿತು ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಜೆ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಂದರ್ಭ ಇದಾಗಿದ್ದು ಕಾಯಿಲೆ ಇಲ್ಲದೆ ಇದ್ದಾಗ್ಯೂ ಅನಗತ್ಯವಾಗಿ ಪ್ರಚಾರ ಕೊಡುವುದು ಬೇಡ. ಮಂಗನ ಕಾಯಿಲೆ ಕುರಿತು ಈವರೆಗೆ ಒಂದೂ ಪ್ರಕರಣ ದಾಖಲಾಗಿಲ್ಲ. ಅಲ್ಲಲ್ಲಿ ಕೆಲವು ಕಡೆಗಳಲ್ಲಿ ಮಂಗ ಸತ್ತಿರುವ ಪ್ರಕರಣ ದಾಖಲಾಗಿದ್ದರೂ ಅದು ಮಂಗನ ಕಾಯಿಲೆಯಿಂದ ಎಂದು ಹೇಳುವ ನಿಖರ ವರದಿ ಬಂದಿಲ್ಲ ಎಂದರು.

ಆರೋಗ್ಯ ಇಲಾಖೆ, ಪಶುವೈದ್ಯ ಇಲಾಖೆ, ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಸಮನ್ವಯತೆ ಇಟ್ಟುಕೊಂಡು ಸಮಸ್ಯೆಯನ್ನು ನಿಭಾಯಿಸಬೇಕು. ಈ ಹಿಂದೆ ಮಂಗನ ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಡಿಎಂಪಿ, ದೀಪಾ ಆಯಿಲ್ ಹಚ್ಚಿಕೊಳ್ಳಲು ಸಲಹೆ ನೀಡಬೇಕು. ಕಟ್ಟಿಗೆ, ದನ ಮೇಯಿಸಲು ಇತರ ಸಂದರ್ಭದಲ್ಲಿ ಕಾಡಿಗೆ ಹೋಗುವವರು ಕಡ್ಡಾಯವಾಗಿ ಡಿಎಂಪಿ ಆಯಿಲ್ ಲೇಪಿಸಿಕೊಳ್ಳಬೇಕು. ಶಾಲೆ, ಅಂಗನವಾಡಿ ಸುತ್ತಮುತ್ತ ಫೈರ್‌ಲೈನ್ ಹಾಕುವತ್ತ ಅರಣ್ಯ ಇಲಾಖೆ ಗಮನ ಹರಿಸಬೇಕು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದ ಟಾಸ್ಕ್‌ಫೋರ್ಸ್ ಸಕ್ರಿಯಗೊಳಿಸುವಂತೆ ಸೂಚನೆ ನೀಡಿದ ಅವರು, ನಿರಂತರವಾಗಿ ಎಲ್ಲ ಇಲಾಖೆಗಳು ಮಂಗನಕಾಯಿಲೆಗೆ ಸಂಬಂಧಿಸಿದಂತೆ ಸಭೆಯನ್ನು ಕರೆದು ಕ್ರಮಕ್ಕೆ ಮುಂದಾಗಿ ಎಂದರು.

ಶಿವಮೊಗ್ಗದ ಉಪಮುಖ್ಯ ವೈದಾಧಿಕಾರಿ ಡಾ. ಹರ್ಷವರ್ಧನ್ ಮಾತನಾಡಿ, ಮಂಗಗಳು ಬೇರೆ ಬೇರೆ ಕಾರಣಕ್ಕೆ ಸಾವನ್ನಪ್ಪುತ್ತವೆ. ಕೆಲವು ಜಗಳವಾಡಿ ಸಾವನ್ನಪ್ಪುತ್ತವೆ. ಅಪಘಾತದಲ್ಲಿ ಮರಣ ಹೊಂದುತ್ತವೆ, ತೋಟಕ್ಕೆ ದಾಳಿ ಇಡುತ್ತವೆ ಎಂದು ಅವುಗಳು ಕೊಲ್ಲಲ್ಪಡುತ್ತವೆ. ಎಲ್ಲ ಕಡೆಗಳಲ್ಲೂ ಮಂಗಗಳ ಮರಣಗಳನ್ನು ದಾಖಲಿಸುವ ಪ್ರಕರಣ ನಡೆಯುತ್ತಿದ್ದು ಜನ ಜಾಗೃತರಾಗಿದ್ದಾರೆ. ಸಾಗರ ತಾಲೂಕಿನಲ್ಲಿ ಅಕ್ಟೋಬರ್‌ನಲ್ಲಿ 5, ನವೆಂಬರ್‌ನಲ್ಲಿ 9 ಮಂಗಗಳು ಮೃತಪಟ್ಟಿವೆ. ಆದರೆ ಇವ್ಯಾವುದರಲ್ಲಿಯೂ ಮಂಗನ ಕಾಯಿಲೆಯ ಗುಣಲಕ್ಷಣಗಳು ಕಂಡುಬಂದಿಲ್ಲ, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ಮಂಗಗಳು ಸಾವನ್ನಪ್ಪಿರುವ ಪ್ರದೇಶದ ಸುತ್ತಮುತ್ತ, ಜನವಸತಿ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ, ಅಲ್ಲದೇ ಡಿಎಂಪಿ ಆಯಿಲ್ ವಿತರಣೆ ಹಾಗೂ ಜ್ವರದಿಂದ ಬಳಲುತ್ತಿರುವ ಪ್ರಕರಣಗಳು ಇದ್ದಲ್ಲಿ ದಾಖಲಿಸಲಾಗುತ್ತಿದೆ. ಸಾಗರ ತಾಲೂಕಿನಲ್ಲಿ ಯಾವುದೇ ಮಂಗನ ಕಾಯಿಲೆಯ ಪ್ರಕರಣಗಳು ಕಂಡುಬಂದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net