ಸಾಗರ ತಾಲೂಕಿನಲ್ಲಿ ಕಾಂಗ್ರೆಸ್‌ನಿಂದ 15 ಕಿಮೀ ಸ್ವಾತಂತ್ರ್ಯ ನಡಿಗೆ

SGR WEB 2
Published on

ಸಾಗರ: ಸಾಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಯುವ ಕಾಂಗ್ರೆಸ್‌ನಿಂದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಶನಿವಾರ ಮಾಸೂರು ಗ್ರಾಮ ಪಂಚಾಯಿತಿ ದಿಗಟೆಕೊಪ್ಪದಿಂದ ಸಾಗರ ಗಾಂಧಿ ಮೈದಾನದವರೆಗೆ 15 ಕಿ.ಮೀ. ನಡೆಯಿತು. ಕಾಂಗ್ರೆಸ್ ಪ್ರಮುಖರು ಮತ್ತು ಕಾರ್ಯಕರ್ತರು ಸ್ವಾತಂತ್ರ್ಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಪಾದಯಾತ್ರೆ ಯಶಸ್ಸಿಗೆ ಕಾರಣೀಭೂತರಾದರು.

ದಿಗಟೆಕೊಪ್ಪ ವೃತ್ತದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ನಂತರ ಸ್ವಾತಂತ್ರ್ಯ ನಡಿಗೆಯು ಕೆಳದಿಪುರ, ಬೇಳೂರು, ಮಾಲ್ವೆ, ಹಂದಿಗೋಡು, ಈಳಿ, ಸೂರನಗದ್ದೆ ಮೂಲಕ ಸಾಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧಿಮೈದಾನ ತಲುಪಿತು.

ಗಾಂಧಿ ಮೈದಾನದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು, ದೇಶಕ್ಕೆ ಸ್ವಾತಂತ್ರ್ಯವು ಲಕ್ಷಾಂತರ ಜನರ ತ್ಯಾಗಬಲಿದಾನದಿಂದ ಬಂದಿರುವುದನ್ನು ಯಾರೂ ಮರೆಯಬಾರದು. ಇತ್ತೀಚಿನ ವರ್ಷಗಳಲ್ಲಿ ದೇಶಕ್ಕಾಗಿ ದುಡಿದ ಜನರನ್ನು ಮರೆಯುವ ಕೆಟ್ಟ ಸಂಸ್ಕೃತಿ ಪ್ರಾರಂಭವಾಗಿರುವುದು ದುರದೃಷ್ಟಕರ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು ಅವರನ್ನು ಅವಹೇಳನೆ ಮಾಡುತ್ತಿರುವುದು, ಅವರ ಸಾಧನೆಯನ್ನು ಮರೆಮಾಚುವ ಕೆಲಸ ನಡೆಸುತ್ತಿರುವುದನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಜಾತಿ ಧರ್ಮಗಳಲ್ಲಿ ಕೋಮು ಭಾವನೆಯನ್ನು ಬಿತ್ತುತ್ತಿರುವ ಬಿಜೆಪಿಗೆ ಬರುವ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಭಾರತ ಅನೇಕತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ಮೂಲಕ ಜಗತ್ತಿಗೆ ಮಾದರಿಯಾಗಿದೆ. ಇಂತಹ ದೇಶದಲ್ಲಿ ಒಡೆದು ಆಳುವ ಮನಸ್ಥಿತಿ ಹೆಚ್ಚುಕಾಲ ನಡೆಯುವುದಿಲ್ಲ. ದೇಶವನ್ನು ಕೋಮುದ್ವೇಷದ ಹಿನ್ನೆಲೆಯಲ್ಲಿ ಒಡೆಯುವ ಸಂಸ್ಕೃತಿಗೆ ಜನರು ತಕ್ಕಪಾಠವನ್ನು ಭವಿಷ್ಯದಲ್ಲಿ ಕಲಿಸುತ್ತಾರೆ. ಗೋಡ್ಸೆಯಂಥವರ ದೇವಾಲಯ ಕಟ್ಟಿಸಿ, ಫ್ಲೆಕ್ಸ್ ಹಾಕುತ್ತಿದ್ದಾರೆ ಎಂದರೆ ದೇಶದ ಸ್ಥಿತಿ ಎಲ್ಲಿಗೆ ತಲುಪಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net