

ಸಾಗರ: ಸ್ವಾತಂತ್ರ್ಯದ ಅಮೃತೋತ್ಸವ ಅಂಗವಾಗಿ ಆ. 11ರಿಂದ ಆ.17ರವರೆಗೆ ತಾಲೂಕಿನ 30 ಸಾವಿರ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರೀಯತೆ ಮೆರೆಯಬೇಕು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಗಾಂಧಿಮೈದಾನದಲ್ಲಿ ಶುಕ್ರವಾರ ಸಂಜೆ ತಾಲೂಕು ಆಡಳಿತದಿಂದ ಕರೆಯಲಾಗಿದ್ದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರಧ್ವಜವನ್ನು ಆಡಳಿತದ ವತಿಯಿಂದಲೇ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಬಾವುಟ ಕಟ್ಟುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಬೆಳಗ್ಗೆ ಧ್ವಜವನ್ನು ಕಟ್ಟಿ ಸಂಜೆ 6ಗಂಟೆಗೆ ರಾಷ್ಟ್ರಧ್ವಜವನ್ನು ಇಳಿಸಬೇಕು. ಒಂದರ್ಥದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ರಾಷ್ಟ್ರಭಕ್ತಿ ಉಂಟು ಮಾಡಲು ಮತ್ತು ತ್ರಿವರ್ಣ ರಾಷ್ಟ್ರಧ್ವಜದ ಜತೆಗಿನ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಈ ಕಾರ್ಯಕ್ರಮ ಅತ್ಯಂತ ಪೂರಕವಾಗುತ್ತದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮೂಲಕ, ಗ್ರಾಮ ಪಂಚಾಯಿತಿ ಮೂಲಕ ಮನೆಮನೆಗೆ ಧ್ವಜ ತಲುಪಿಸುವ ಕೆಲಸ ಮಾಡಬೇಕು. ಯಾರೂ ನಮಗೆ ರಾಷ್ಟ್ರಧ್ವಜ ಸಿಕ್ಕಿಲ್ಲ ಎಂದು ಹೇಳಬಾರದು. ಇದು ದೇಶದ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆಸುತ್ತಿರುವುದರಿಂದ ಪಕ್ಷಾತೀತವಾಗಿ ಕಾರ್ಯಕ್ರಮ ನಡೆಯಬೇಕು. ಸಾಧ್ಯವಾದರೆ ಎಲ್ಲ ಪಕ್ಷದವರನ್ನೂ ಒಳಗೊಂಡ ಸಮಿತಿ ರಚನೆ ಮಾಡುವಂತೆ ಸಲಹೆ ನೀಡಿದರು.
ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಮಾತನಾಡಿ, ಎಲ್ಲ ಇಲಾಖೆಗಳು ತಮ್ಮ ಸಾರ್ವಜನಿಕ ಸೇವೆಯ ಬಗ್ಗೆ ಫೆಕ್ಸ್ ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸರ್ಕಾರ ನಿಗದಿಪಡಿಸಿದ ಎಲ್ಲ ದಿನಗಳಲ್ಲೂ ರಾಷ್ಟ್ರಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯ ಟಿ.ಡಿ.ಮೇಘರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಕಮ್ಮಾರ್, ಪೌರಾಯುಕ್ತ ರಾಜು ಡಿ.ಬಣಕಾರ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.