

ಸಾಗರ: ಗ್ರಾಮದಲ್ಲಿ ಗೋಶಾಲೆ ಸ್ಥಾಪನೆ ಬೇಡ ಹಾಗೂ ಗೋಶಾಲೆ ನಿರ್ಮಾಣಕ್ಕೆಂದು ಮಂಜೂರು ಮಾಡಿರುವ ಗೋಮಾಳದ ಜಾಗವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತಾಲೂಕಿನ ನಾಡಕಲಸಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರೈತ ಸಂಘದ ನೇತೃತ್ವದಲ್ಲಿ ಗುರುವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ನಾಡಕಲಸಿ ಗ್ರಾಮದ ಸರ್ವೇ ನಂ.49ರಲ್ಲಿ 112 ಎಕರೆ ಗೋಮಾಳವಿದೆ. ಅದರಲ್ಲಿ 48 ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಿಸಲು ಜಮೀನು ಮಂಜೂರು ಮಾಡಲು ಸರ್ಕಾರ ಮುಂದಾಗಿತ್ತು. ಇದನ್ನು ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದಾಗ, ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಪಂಗೆ ಗೋಶಾಲೆಯನ್ನು ಸ್ಥಳಾಂತರಿಸಲಾಗಿತ್ತು. ಆದರೆ ಪಹಣಿಯಲ್ಲಿ 48 ಎಕರೆ ಗೋಶಾಲೆಗೆ ಮೀಸಲು ಎಂದು ದಾಖಲಾಗಿದೆ. ಆರ್‌ಟಿಸಿಯಲ್ಲಿ ನಮೂದಾಗಿರುವುದನ್ನು ತಕ್ಷಣ ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದ ಸರ್ವೇ ನಂ.49ರಲ್ಲಿ 40 ಮಂದಿ ಸಾಗುವಳಿ ಮಾಡುತ್ತಿದ್ದಾರೆ. ಸದರಿ ಜಮೀನು ಮಂಜೂರಾತಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 6 ರೈತರಿಗೆ ಜಮೀನು ಮಂಜೂರಾಗಿದೆ. ಇನ್ನು ಗ್ರಾಮದಲ್ಲಿರುವ ಸಾವಿರಾರು ಜಾನುವಾರುಗಳಿಗೆ ಮೇಯಲು ಈ ಗೋಮಾಳ ಬಿಟ್ಟು ಬೇರೆ ಸ್ಥಳವಿಲ್ಲ. ಆದಕಾರಣ ಕೂಡಲೇ ಆರ್‌ಟಿಸಿ ರದ್ದುಪಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಎಚ್ಚರಿಕೆ ನೀಡಿದರು.