ಸಾಗರ: ಇತಿಹಾಸ ಪ್ರಸಿದ್ಧ ಅರಮನೆ ಗೌರಿ ಪ್ರತಿಷ್ಠಾಪನೆ; ಭಕ್ತರಿಂದ ಬಾಗಿನ ಅರ್ಪಣೆ

SGR WEB
Published on

ಸಾಗರ: ಅರಮನೆ ಗೌರಿ ಪ್ರತಿಷ್ಠಾಪನೆಗೆ ಐದು ಶತಮಾನಗಳ ಇತಿಹಾಸವಿದೆ. ಅಂದಿನಿಂದಲೂ ಸಂಪ್ರದಾಯವನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಭಕ್ತರು ಬಾಗಿನ ಸಮರ್ಪಿಸಿ ಕೃತಾರ್ಥರಾಗುತ್ತಿದ್ದಾರೆ ಎಂದು ಅರ್ಚಕ ಲಕ್ಷ್ಮಣ ಜೋಯ್ಸ ಹೇಳಿದರು.

ಗೌರಿ ಹಬ್ಬದ ಅಂಗವಾಗಿ ಸಾಗರದ ಎಸ್‌ಪಿಎಂ ರಸ್ತೆಯಲ್ಲಿ ಮಂಗಳವಾರ ಅರಮನೆ ಗೌರಿ ಪ್ರತಿಷ್ಠಾಪನಾ ಕಾರ್ಯದ ಧಾರ್ಮಿಕ ವಿಧಿವಿಧಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಒಂದು ವರ್ಷ ಅರಮನೆ ಗೌರಿಯನ್ನು ಸೂರ್ಯನಾರಾಯಣ ಜೋಯ್ಸ ಮನೆಯಲ್ಲಿ, ಇನ್ನೊಂದು ವರ್ಷ ಚಂದ್ರಶೇಖರ್ ಜೋಯ್ಸ ಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಸ್ವರ್ಣ ಗೌರಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥ ನೆರವೇರುತ್ತವೆ ಎಂಬ ನಂಬಿಕೆ ಇದೆ. ನೂರಾರು ಭಕ್ತರು ಗೌರಿ ದರ್ಶನಕ್ಕೆ ಬರುತ್ತಾರೆ. ಇಲ್ಲಿ ವಿಶೇಷ ಎಂದರೆ ಗೌರಿಯನ್ನು ಮುಟ್ಟಿ ಪೂಜಿಸುವ ಅವಕಾಶ ಇದೆ ಎಂದರು.

ಮೊದಲು ಕೆಳದಿ ಸಂಸ್ಥಾನದವರು ಅರಮನೆಯಲ್ಲಿ ಗೌರಿಯನ್ನು ಪೂಜಿಸುತ್ತಿದ್ದರು. ನಂತರ ಇಕ್ಕೇರಿ ಸಂಸ್ಥಾನಕ್ಕೆ ರಾಜಧಾನಿ ಬದಲಾವಣೆಯಾದಾಗ ಇಕ್ಕೇರಿ ಅರಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ನಮ್ಮ ವಂಶಸ್ಥರು ಅನಾದಿ ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದು, ರಾಜಾಡಳಿತ ಕೊನೆಯಾದ ಮೇಲೆ ನಮ್ಮ ಮನೆಯಲ್ಲಿ ಪೂಜಿಸಲಾಗುತ್ತಿದೆ. ಬುಧವಾರ ರಾತ್ರಿ 9ರ ವರೆಗೆ ಪೂಜಿಸಲು ಅವಕಾಶವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net