ಸಾಕ್ಷಿ ಗುಡ್ಡೆಗಳನ್ನು ತೋರಿಸುತ್ತೇನೆ: ಡಿಕೆಶಿ ಟೀಕೆಗೆ ಎಚ್.ಡಿ. ರೇವಣ್ಣ ತಿರುಗೇಟು

HD Revanna
Published on

ಶ್ರವಣಬೆಳಗೊಳ: ಕಟ್ಟುವವರು ನಾವು. ಅವರು ಬಂದು ಉದ್ಘಾಟನೆ ಮಾಡುವುದು ಎಂಬುದಕ್ಕೆ ಸಾಕ್ಷಿ ಗುಡ್ಡೆಗಳನ್ನು ತೋರಿಸುತ್ತೇನೆ ಬನ್ನಿ ಎಂದು ಎಚ್.ಡಿ. ರೇವಣ್ಣ ಅವರು ಕಾಂಗ್ರೆಸ್‌ನ ಜನಕಲ್ಯಾಣ ಸಮಾವೇಶದಲ್ಲಿ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿದ ಟೀಕೆಗೆ ತಿರುಗೇಟು ನೀಡಿದರು.

ಸಮಾಧಿಸ್ತರಾದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿ ನಿಷಿಧಿ ಮಂಟಪಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಯಾವ್ಯಾವ ಸಾಕ್ಷಿ ಗುಡ್ಡೆ ಇದೆ ಎಂಬುದನ್ನು ಕಾಲ ಬಂದಾಗ ಹೇಳುತ್ತೇನೆ. ಅವರು ಬಂದರೆ ಅವರನ್ನೂ ಕರೆದುಕೊಂಡು ಹೋಗಿ ಎಲ್ಲೆಲ್ಲಿ ಇಂತಹ ಕಡೆ ಸಾಕ್ಷಿ ಗುಡ್ಡೆ ಇದೆ ಅಂತ ತೋರಿಸುತ್ತೇನೆ ಎಂದರು.

ಹಾಸನ ಬಸ್ ಸ್ಟಾೃಂಡ್, ಹಾಸನ-ಬೆಂಗಳೂರು ರೈಲ್ವೆ ಮಾರ್ಗ, 900 ಕೋಟಿ ರೂ. ವೆಚ್ಚದಲ್ಲಿ 24 ಮೇಲ್ಸೇತುವೆ, ಮೆಡಿಕಲ್ ಕಾಲೇಜಿಗೆ 250 ಕೋಟಿ ರೂ. ಕೊಟ್ಟಿದ್ದೇವೆ. ಹಾಸನ ಫ್ಲೈ ಓವರ್‌ವನ್ನು ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ? ಕೋರ್ಟ್, ಇಂಜಿನಿಯರಿಂಗ್ ಕಾಲೇಜು, 120 ಕೋಟಿ ರೂ. ಖರ್ಚು ಮಾಡಿರುವ ನಂಬರ್ ಒನ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇದ್ದರೆ ಅದು ಹಾಸನ, ರಾಮನಗರ, ಹೊಳೆನರಸೀಪುರ ತಾಲೂಕಿನ, ಮೊಸಳೆಹೊಸಳ್ಳಿಗಳಲ್ಲಿ ಮಾತ್ರ. ಈ ಜಿಲ್ಲೆಯಲ್ಲಿ ಕಾಲೇಜುಗಳನ್ನು ಯಾವ ರೀತಿ ಮಾಡಿದ್ದೇವೆ? ಈ ಜಿಲ್ಲೆಗೆ ಏನು ಬೇಕೋ ಅದನ್ನು ದೇವೇಗೌಡರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಯಾವ್ಯಾವ ಸಾಕ್ಷಿ ಗುಡ್ಡೆ ಬೇಕು ತೋರಿಸೋಣ ಕಾಲ ಬಂದಾಗ ಉತ್ತರ ಕೊಡುತ್ತೇನೆ ಎಂದರು.

ಇನ್ನು ಸ್ವಲ್ಪ ದಿನ ಹೋಗಲಿ. ರಾಜಕೀಯವಾಗಿ ಏನೇನು ನಡೆಯುತ್ತದೆ ಅಂತ ಹೇಳುತ್ತೇನೆ. ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ಲುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿ, 2023 ರಲ್ಲಿ ಚುನಾವಣೆ ನಡೆದಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಇಳಿದ ಮೇಲೆ ಮೂರು ವರ್ಷ ಈ ಜಿಲ್ಲೆಯಲ್ಲಿ ರಾಜಕಾರಣ ಏನು ನಡೆಯಿತು ಅಂತ ಜನರಿಗೆ ಗೊತ್ತಿದೆ. ಈಗ ಏನೂ ಹೇಳಲ್ಲ ಎಂದರು.

ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಒಕ್ಕಲಿಗರ ನಾಯಕರನ್ನು ಬೆಳೆಸಿಲ್ವಾ? ಬಿ.ಎಲ್.ಶಂಕರ್ ಅವರು ಇಲ್ಲಿ ಇದ್ದಾಗ ಅವರಿಗೆ ಏನೇನು ಅಧಿಕಾರ ಇತ್ತು? ಕಾಂಗ್ರೆಸ್‌ಗೆ ಹೋದ ಮೇಲೆ ಏನ್ಮಾಡಿದ್ದಾರೆ? ಅವರ ಪರಿಸ್ಥಿತಿ ಏನಾಗಿದೆ? ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರ ಬಿಡಿಸಿಕೊಂಡು ಇದ್ದಾರೆ. ಅವರಿಗೆ ಒಳ್ಳೆಯದಾಗಲಿ. ಬಿ.ಎಲ್.ಶಂಕರ್ ನನ್ನ ಆತ್ಮೀಯ ಸ್ನೇಹಿತರು. ನನಗೆ ಅವರ ಬಗ್ಗೆ ಗೌರವವಿದೆ. ಈಗಲಾದರೂ ಅವರಿಗೆ ಎಂಎಲ್‌ಸಿ ಸ್ಥಾನ ಕೊಟ್ಟು, ಮಂತ್ರಿ ಮಾಡಿ ನಮ್ಮ ಸಮಾಜದ ಗೌರವ ಉಳಿಸಿಕೊಡಿ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net