

ಮೂಡಿಗೆರೆ: ಸಾಕ್ಷರತಾ ಚಳವಳಿಯಲ್ಲಿ ದಲಿತ ಸಾಹಿತ್ಯ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದರಿಂದ ದಲಿತ ಸಾಹಿತ್ಯ ಗಟ್ಟಿಯಾಗುತ್ತಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅಭಿಪ್ರಾಯಪಟ್ಟರು.
ತಾಪಂನಲ್ಲಿ ಸೋಮವಾರ ನಡೆದ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರಲ್ಲೂ ದಲಿತ ಸಾಹಿತ್ಯದ ಬಗೆಗಿನ ಜಾಗೃತಿ ಮೂಡಿಸುವ ಸಲುವಾಗಿ ತಾಲೂಕಿನಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಘಟಕ ಪ್ರಾರಂಭಿಸಲಾಗಿದೆ. ಇದು ಎಲ್ಲ ಗ್ರಾಮದಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಹಳ್ಳಿಗಳಲ್ಲಿ ಎಲೆಮರೆಕಾಯಿಯಂತಿರುವ ದಲಿತ ಸಾಹಿತ್ಯವನ್ನು ಹುಡುಕಿ ಮುಖ್ಯ ವೇದಿಕೆಗೆ ಕರೆತರುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ದಲಿತ ಸಾಹಿತ್ಯ ಜನ್ಮತಳೆಯಲು ಸಮಾಜದಲ್ಲಿ ನಡೆದ ದಲಿತ ಚಳವಳಿ ಪ್ರೇರಣೆಯಾಗಿದೆ. 1976ರಲ್ಲಿ ಪ್ರಾರಂಭಗೊಂಡ ದಲಿತ ಚಳವಳಿಯ ಮುಂದಾಳತ್ವವನ್ನು ಧರ್ಮಸೇನಾ, ಶ್ಯಾಮ ಸುಂದರ್, ಸಿದ್ದಪ್ಪ, ಕೆ.ಭೀಮಯ್ಯ, ಭರಣಯ್ಯ, ಆರ್.ರಾಚಯ್ಯ, ಬಿ.ಕೃಷ್ಣಪ್ಪ, ಗೋವಿಂದಯ್ಯ ಸೇರಿದಂತೆ ಅನೇಕರು ವಹಿಸಿದ್ದರು. ಆಗ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಚಳವಳಿಯಲ್ಲಿ ಕ್ರಾಂತಿಗೀತೆ ಹಾಡಲಾಯಿತು. ಅದರ ಪ್ರೇರಣೆಯಿಂದ ದಲಿತ ಸಾಹಿತ್ಯ ಹುಟ್ಟಿಕೊಂಡಿದೆ. ಈಗಲೂ ದಲಿತ ಚಳವಳಿಯ ಕ್ರಾಂತಿಗೀತೆಯನ್ನು ಎಲ್ಲ ಸಂಘಟನೆಗಳು ಬಳಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಎಸ್.ಬಿ.ಹಾಲಯ್ಯ, ಮೈಸೂರಿನ ದಲಿತ ಸಾಹಿತ್ಯ ಪರಿಷತ್ ವಿಭಾಗಿಯ ಸಂಯೋಜಕ ಚಂದ್ರಗುಪ್ತ, ತಾಲೂಕು ಘಟಕದ ನೂತನ ಅಧ್ಯಕ್ಷ ಪಿ.ಕೆ.ಮಂಜುನಾಥ್, ಕಾರ್ಯದರ್ಶಿ ವೆಂಕಟೇಶ್, ವಿವಿಧ ಸಂಘಟನೆಗಳ ಮುಖಂಡರಾದ ಎಲ್.ಬಿ.ರಮೇಶ್, ಯು.ಬಿ.ಮಂಜಯ್ಯ, ಮುತ್ತಪ್ಪ, ಮಹೇಂದ್ರ ಮೌರ್ಯ, ಕರವೇ ತಾಲೂಕು ಘಟಕದ ಅಧ್ಯಕ್ಷ ವಿನೋದ್‌ಕುಮಾರ್, ಸುಧೀರ್, ಸುರೇಂದ್ರ, ಗಿರೀಶ್, ಬಕ್ಕಿ ರವೀಂದ್ರ, ಸುಂದರೇಶ್, ಬಕ್ಕಿ ಮಂಜು, ಸಿದ್ದೇಶ್, ಸಚಿನ್, ಲೋಕೇಶ್, ಶೇಖರಪ್ಪ, ಮೈಲಾರಪ್ಪ ಇತರರಿದ್ದರು.