ಸಾಕ್ಷರ ಸನ್ಮಾನದಿಂದ ಗ್ರಾ.ಪಂ. ಸದಸ್ಯರ ಅರಿವು ವಿಸ್ತರಣೆ

14 mlv 1
Published on

ಮಳವಳ್ಳಿ: ಅಕ್ಷರ ಕಲಿಯದ ಗ್ರಾಮ ಪಂಚಾಯಿತಿ ಸದಸ್ಯರನ್ನು ಸಾಕ್ಷರರನ್ನಾಗಿಸುವ ಮೂಲಕ ಅವರಿಗೆ ಗ್ರಾಪಂ ಆಡಳಿತದ ಸಾಮಾನ್ಯ ಜ್ಞಾನದ ಅರಿವು ಮೂಡಿಸಿ, ಆ ಮೂಲಕ ತಮಗೆ ಸಿಕ್ಕಿರುವ ಅಧಿಕಾರದ ಹಕ್ಕನ್ನು ಚಲಾಯಿಸಿ, ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳುವುದು ಸಾಕ್ಷರ ಸನ್ಮಾನ ಯೋಜನೆಯ ಉದ್ದೇಶವಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ತಿಳಿಸಿದರು.


ಪಟ್ಟಣದ ತಾ.ಪಂ.ಕಚೇರಿಯಲ್ಲಿ ಶುಕ್ರವಾರ ಸಾಕ್ಷರತಾ ಸಂಪನ್ಮೂಲ ವ್ಯಕ್ತಿಗಳಿಗೆ ಕಲಿಕಾ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 69 ಶಿಕ್ಷಣ ಕಲಿಯದ ಗ್ರಾ.ಪಂ.ಸದಸ್ಯರು ಇದ್ದಾರೆ. ಇವರಿಗೆ ಪಂಚಾಯತ್ ರಾಜ್ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ನವಸಾಕ್ಷರಸ್ಥರನ್ನಾಗಿಸಲು ನೂರು ಗಂಟೆಗಳ ಅವಧಿಯಲ್ಲಿ ಅಕ್ಷರ ಕಲಿಸುವ ಯೋಜನೆ ಇದಾಗಿದೆ ಎಂದರು.


ಈ ಯೋಜನೆ ಸಮರ್ಪಕ ಜಾರಿಗಾಗಿ ಸ್ಥಳೀಯವಾಗಿ ಸ್ವಸಹಾಯ ಸಂಘಗಳ ವಿದ್ಯಾವಂತರನ್ನು ಅಕ್ಷರ ಕಲಿಸುವಿಕೆಗೆ ಆಯ್ಕೆಮಾಡಿಕೊಳ್ಳಲಾಗಿದೆ. ಸಾಕ್ಷರಸ್ಥರಾಗಿಸಲು ಕಲಿಸುವ ಮತ್ತು ಕಲಿಯುವ ಗ್ರಾಪಂ ಸದಸ್ಯರಿಗೆ ಆಸಕ್ತಿ ಮೂಡಿಸಲು ಮೂರು ಸಾವಿರ ರೂಪಾಯಿ ಗೌರವಧನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.


ಈ ಯೋಜನೆಯ ಸದುಪಯೋಗವನ್ನು ಶಿಕ್ಷಣ ಕಲಿಯದ 69 ಗ್ರಾಪಂ ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ತಾ.ಪಂ.ಸಹಾಯಕ ನಿರ್ದೇಶಕ ಪಾರ್ಥಸಾರಥಿ, ನೋಡಲ್ ಅಧಿಕಾರಿ ಶಿವಕಾಳಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net