

ವಿಜಯಪುರ: ಸಾಕುನಾಯಿ, ಬೆಕ್ಕುಗಳಿಗೆ ಪಶುವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು. ಅವುಗಳು ಕಚ್ಚಿದರೆ ಕಡ್ಡಾಯವಾಗಿ ರೇಬಿಸ್ ಲಸಿಕೆ ಪಡೆದುಕೊಳ್ಳಬೇಕು ಎಂದು ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಾರಾಯಣಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸಾಕು ಹಾಗೂ ಬಿಡಾಡಿ ಪ್ರಾಣಿಗಳ ಕಡಿತದಿಂದ ಉಂಟಾಗುವ ರೇಬಿಸ್ ಕಾಯಿಲೆ ಬಗೆಗಿನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಪ್ರತಿವರ್ಷ 30 ಸಾವಿರಕ್ಕೂ ಹೆಚ್ಚು ಮಂದಿ ರೇಬಿಸ್‌ನಿಂದ ಸಾಯುತ್ತಿದ್ದಾರೆ. ಆದ್ದರಿಂದ, ಪ್ರಾಣಿಗಳಿಗೆ ಕಾಲಾನುಕಾಲಕ್ಕೆ ರೇಬಿಸ್ ಚುಚ್ಚುಮದ್ದು ಕೊಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪಾಲಿ ಕ್ಲಿನಿಕ್‌ನ ಉಪನಿರ್ದೇಶಕ ಡಾ. ಹರೀಶ್ ಮಾತನಾಡಿ, ಸಾಕು ಪ್ರಾಣಿಗಳು ಅಥವಾ ಬೀದಿ ಪ್ರಾಣಿಗಳು ಎಂದರೆ ನಾಯಿ, ಬೆಕ್ಕುಗಳು ಅಲ್ಲದೆ ರೇಬಿಸ್‌ಪೀಡಿತ ಇಲಿ, ಬಾವಲಿ, ಮುಂಗುಸಿ, ಕೋತಿ ಮತ್ತಿತರ ಪ್ರಾಣಿಗಳು ಸೇರುತ್ತವೆ. ಹಾಗಾಗಿ, ಪ್ರತಿಯೊಬ್ಬರೂ ಇದರ ಬಗ್ಗೆ ಮುಂಜಾಗರೂಕತೆ ವಹಿಸಬೇಕು. ಯಾವುದೇ ಪ್ರಾಣಿ ಕಚ್ಚಿದ ಕೂಡಲೇ ಸೋಪ್‌ನಿಂದ ಗಾಯವನ್ನು ಸ್ವಚ್ಛಗೊಳಿಸಿ, ನಂತರ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿ, ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ಗುರುವಾರದವರೆಗೆ (ಸೆ.30) ಸರ್ಕಾರಿ ಪಶುವೈದ್ಯ ಆಸ್ಪತ್ರೆಯಲ್ಲಿ ಸಾಕುಪ್ರಾಣಿಗಳಿಗೆ ರೇಬಿಸ್ ಚುಚ್ಚುಮದ್ದನ್ನು ಉಚಿತವಾಗಿ ಕೊಡಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪುರಸಭೆ ಉಪಾಧ್ಯಕ್ಷ ಎಂ.ಕೇಶವಪ್ಪ, ಸದಸ್ಯರಾದ ಸಿ. ನಾರಾಯಣಸ್ವಾಮಿ, ಭವ್ಯ, ವಿಮಲಾ, ಪಶುವೈದ್ಯ ಇಲಾಖೆಯ ವೈದ್ಯರಾದ ಪ್ರಮೀಳಾ, ಲೋಕೇಶ್, ವಸಂತ್ ಕುಮಾರ್, ಜಾನುವಾರು ಅಭಿವೃದ್ಧಿ ಅಧಿಕಾರಿ ಚಿಕ್ಕಣ್ಣ, ಪಶುವೈದ್ಯಕೀಯ ಪರೀಕ್ಷಕ ಗೋವಿಂದರಾಯ, ಸಿಬ್ಬಂದಿ ಹರೀಶ್, ಖಲೀಂ, ಉಪಪ್ರಾಂಶುಪಾಲ ವೆಂಕಟೇಶ್, ಉಪನ್ಯಾಸಕ ರಘು ಮತ್ತಿತರರಿದ್ದರು.